ನವದೆಹಲಿ(ಡಿ.21): ದೇಶದ ಭದ್ರತೆ ಮತ್ತು ಸೈಬರ್ ಅಪರಾಧ ತಡೆಗಟ್ಟುವಲ್ಲಿ ಅತ್ಯಂತ ಮಹತ್ವದ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರ, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ನಿಗಾ ಇಡಲು 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ.

ಯಾವುದೇ ಕಂಪ್ಯೂಟರ್‌ನಲ್ಲಿ ರಚಿತವಾದ, ರವಾನಿಸಲ್ಪಟ್ಟಿರುವ, ಸ್ವೀಕರಿಸಿದ ಅಥವಾ ಸಂಗ್ರಹಿಸಿದ ಮಾಹಿತಿಯ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ 10 ಕೇಂದ್ರೀಯ ಸಂಸ್ಥೆಗಳಿಗೆ ಅಧಿಕಾರ ನೀಡಿದೆ.

ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಆದೇಶ ಹೊರಡಿಸಿದ್ದು, ಗುಪ್ತಚರ ಇಲಾಖೆ, ಮಾದಕದ್ರವ್ಯ ನಿಯಂತ್ರಣ ಮಂಡಳಿ, ರಾಷ್ಟ್ರೀಯ ತನಿಖಾ ಸಂಸ್ಥೆ, ಜಾರಿ ನಿರ್ದೇಶನಾಲಯ, ಕೇಂದ್ರ ನೇರ ತೆರಿಗೆ ಮಂಡಳಿ, ಕಂದಾಯ ಗುಪ್ತಚರ ನಿರ್ದೇಶನಾಲಯ, ಸಿಬಿಐ, ಸಂಪುಟ ಕಾರ್ಯದರ್ಶಿ, ಸಿಗ್ನಲ್ ಗುಪ್ತಚರ ನಿರ್ದೇಶನಾಲಯ(ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಿಗೆ ಮಾತ್ರ) ಮತ್ತು ಪೊಲೀಸ್ ಆಯುಕ್ತರಿಗೆ ಅಧಿಕಾರ ನೀಡಲಾಗಿದೆ.

ಯಾವುದೇ ಕಂಪ್ಯೂಟರ್ ಬಳಕೆದಾರರು ಅಥವಾ ಸೇವೆ ಒದಗಿಸುವವರು ಎಲ್ಲಾ ಸೌಲಭ್ಯಗಳನ್ನು ಮತ್ತು ತಾಂತ್ರಿಕ ನೆರವನ್ನು ಈ 10 ಏಜೆನ್ಸಿಗಳಿಗೆ ವಿಸ್ತರಿಸಲು ಬದ್ಧರಾಗಿರಬೇಕು ಎಂದು ಗೃಹ ಕಾರ್ಯದರ್ಶಿಗಳು ಸೂಚಿಸಿದ್ದಾರೆ. 

ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಸಲಾಗಿದೆ.