ಬೆಂಗಳೂರು :  ಸರ್ಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಮೈತ್ರಿ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ನಿಯಮಾವಳಿಗೆ ತಿದ್ದುಪಡಿ ತರಲು ಮುಂದಾಗಿದೆ.

ಸ್ಥಳೀಯ ಪ್ರದೇಶದ ನಿಗದಿತ ಪರಿಧಿಯಲ್ಲಿ ಸರ್ಕಾರಿ ಶಾಲೆಗಳು ಇಲ್ಲದಿದ್ದಲ್ಲಿ ಮಾತ್ರ ಖಾಸಗಿ ಶಾಲೆಗಳಿಗೆ ಆರ್‌ಟಿಇ ಅಡಿ ಪ್ರವೇಶ ಕಲ್ಪಿಸುವ ಮಹತ್ವದ ನಿರ್ಧಾರವನ್ನು ಸಚಿವ ಸಂಪುಟ ಸಭೆಯು ಕೈಗೊಂಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ತಿದ್ದುಪಡಿ) ನಿಯಮ 2018’ಕ್ಕೆ ಅನುಮೋದನೆ ನೀಡಲಾಯಿತು.

ಈ ಕುರಿತ ತಿದ್ದುಪಡಿ ವಿಧೇಯಕವನ್ನು ಮುಂಬರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಮಂಡಿಸಿ ಸದನದ ಒಪ್ಪಿಗೆ ಪಡೆಯಲಾಗುತ್ತದೆ.

ಸಂಪುಟ ಸಭೆಯ ಬಳಿಕ ಈ ಬಗ್ಗೆ ವಿವರ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣ ಬೈರೇಗೌಡ, ಆರ್‌ಟಿಇ ನಿಯಮಾವಳಿಗೆ ತಿದ್ದುಪಡಿ ತರಲು ಒಪ್ಪಿಗೆ ನೀಡಲಾಗಿದೆ. ಸರ್ಕಾರಿ ಶಾಲೆ ಇಲ್ಲದಿರುವಂತಹ ಸ್ಥಳೀಯ ಪ್ರದೇಶದಲ್ಲಿ ಮಾತ್ರ ಆರ್‌ಟಿಇ ಅಡಿ ಖಾಸಗಿ ಶಾಲೆಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ನಿಯಮಾವಳಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರಿ ಶಾಲೆಗಳು ಇಲ್ಲದ ಪ್ರದೇಶದಲ್ಲಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ನಿಗದಿತ ಶುಲ್ಕವನ್ನು ಪಾವತಿಸಲು ಸರ್ಕಾರ ಸಮ್ಮತಿಸಿದೆ ಎಂದರು.

ಸ್ಥಳೀಯವಾಗಿ ಸರ್ಕಾರಿ ಶಾಲೆ ಇದ್ದು, ಅಲ್ಲಿ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷಣ ಸಿಗಬೇಕು. ಒಂದು ವೇಳೆ ಸರ್ಕಾರಿ ಶಾಲೆ ಇಲ್ಲದಿದ್ದರೆ ಖಾಸಗಿ ಶಾಲೆಯನ್ನು ಗುರುತಿಸಿ ಅಲ್ಲಿ ಪ್ರವೇಶ ಪಡೆಯುವ ಮಕ್ಕಳಿಗೆ ಸರ್ಕಾರವು ಶುಲ್ಕ ಪಾವತಿಸಬೇಕು ಎಂದು ಆರ್‌ಟಿಇ ನಿಯಮ ಜಾರಿಗೊಳಿಸಲಾಗಿದೆ. ಆದರೆ, ರಾಜ್ಯದಲ್ಲಿ ಸರ್ಕಾರಿ ಶಾಲೆ ಇದ್ದರೂ ಖಾಸಗಿ ಶಾಲೆಗೆ ಮಕ್ಕಳು ಸೇರ್ಪಡೆಯಾಗಲು ಒಪ್ಪಿಗೆ ನೀಡಲಾಗಿತ್ತು. ಸರ್ಕಾರ ಈ ಹಿಂದೆ ನಿಯಮವನ್ನು ಸರಿಯಾಗಿ ಪಾಲನೆ ಮಾಡದೆ ಸರ್ಕಾರಿ ಶಾಲೆಗಳಿದ್ದರೂ ಖಾಸಗಿ ಶಾಲೆಗಳಿಗೆ ಪ್ರವೇಶ ಕೊಡಿಸಲಾಗಿದೆ. ಆರ್‌ಟಿಇ ಉದ್ದೇಶ ಅದಾಗಿರಲಿಲ್ಲ. ಹೀಗಾಗಿ ನಿಯಮಾವಳಿಯಲ್ಲಿ ತಿದ್ದುಪಡಿ ತರಲು ಉದ್ದೇಶಿಸಲಾಗಿದ್ದು, ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಇನ್ನು ಮುಂದೆ ಸರ್ಕಾರಿ ಶಾಲೆ ಇಲ್ಲದ ಕಡೆಗಳಲ್ಲಿ ಮಾತ್ರ ಖಾಸಗಿ ಶಾಲೆಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಸರ್ಕಾರಿ ಶಾಲೆಗೆ ಎಷ್ಟುಪ್ರಾಮುಖ್ಯತೆ ನೀಡಬೇಕೋ ಅಷ್ಟೊಂದು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಆರ್‌ಟಿಇ ಜಾರಿಯಾದ ಬಳಿಕ ಸರ್ಕಾರಿ ಶಾಲೆಯತ್ತ ಮಕ್ಕಳು ಬಾರದೆ ದಾಖಲಾತಿಯಲ್ಲಿ ಇಳಿಮುಖವಾಗಿತ್ತು. ಈ ಎಲ್ಲಾ ಅಂಶಗಳನ್ನು ಅವಲೋಕಿಸಿ ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಬೇಕು ಎಂಬ ಕಾರಣಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ?

ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ನಿಯಮಾವಳಿಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರದ ತೀರ್ಮಾನದ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ನಡೆದಿದೆಯೇ ಎಂಬ ಅನುಮಾನ ಮೂಡಿದೆ.

ರಾಜ್ಯದ ಹಲವು ಉದ್ಯಮಿಗಳು, ರಾಜಕಾರಣಿಗಳು ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದುಕೊಳ್ಳಲು ಲಕ್ಷಾಂತರ ರು. ಶುಲ್ಕ ಪಾವತಿಸಬೇಕಾಗುತ್ತದೆ. ಆರ್‌ಟಿಇ ಕಾಯ್ದೆ ಜಾರಿಯಾದ ನಂತರ ಶೇ.25ರಷ್ಟುಸೀಟುಗಳನ್ನು ಸರ್ಕಾರ ನಿಗದಿಪಡಿಸಿದ ಕಡಿಮೆ ಶುಲ್ಕಕ್ಕೆ ಬಡವರಿಗೆ ನೀಡಬೇಕಾಗುತ್ತಿತ್ತು. ಇದರಿಂದ ಶಿಕ್ಷಣ ಸಂಸ್ಥೆಗಳ ಆದಾಯಕ್ಕೆ ತುಸು ಕತ್ತರಿ ಬಿದ್ದಿತ್ತು.

ಆರ್‌ಟಿಇ ಅಡಿ ಪ್ರವೇಶ ಪಡೆಯುವ ಮಕ್ಕಳ ಪರವಾಗಿ ಅವರ ವಿದ್ಯಾಭ್ಯಾಸದ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ಸರ್ಕಾರವೇ ಭರಿಸುತ್ತಿದೆ. ಇದು ಖಾಸಗಿ ಶಾಲೆಗಳಿಗೆ ಯಾವುದೇ ರೀತಿಯಲ್ಲಿಯೂ ಲಾಭದಾಯಕವಾಗಿಲ್ಲ. ಹೀಗಾಗಿ ಸರ್ಕಾರದ ಮೇಲೆ ಒತ್ತಡ ತಂದು ಆರ್‌ಟಿಇ ನಿಯಮಾವಳಿಗೆ ತಿದ್ದುಪಡಿ ತರುವ ಪ್ರಯತ್ನ ನಡೆಸಿರಬಹುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಸರ್ಕಾರಿ ಶಾಲೆಗಳು ಇಲ್ಲದ ಪ್ರದೇಶದಲ್ಲಿ ಮಾತ್ರ ಖಾಸಗಿ ಶಾಲೆಗಳ ಪ್ರವೇಶಕ್ಕೆ ಅನುಮತಿ ಎಂಬ ನಿಯಮವನ್ನು ಖಾಸಗಿ ಶಾಲೆಗಳು ತಮ್ಮ ಲಾಭಕ್ಕಾಗಿ ಬಳಸಿಕೊಂಡು ಬಡ ಮಕ್ಕಳಿಗೆ ಪ್ರವೇಶ ನೀಡಲು ನಿರಾಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.