ಬೆಂಗಳೂರು :  ‘ನಾವು ಪೂಜಿಸುವ ದೇವರ ಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಕುರಿತ ಮಾತು ಕೇಳಿ ಅವರ ಬಗ್ಗೆ ನನಗೆ ತಡೆಯಲಾರದಷ್ಟುಕೋಪ ಬಂತು. ಯಾವಾಗಲೂ ಹಿಂದೂ ವಿಚಾರಗಳನ್ನು ಟೀಕಿಸುವವರ ಪರ ಜೋರು ಭಾಷಣ ಮಾಡುತ್ತಿದ್ದರು. ಹೀಗೇ ಬಿಟ್ಟರೆ ಮಾತನಾಡುತ್ತಲೇ ಇರುತ್ತಾರೆ ಎಂದು ಅವರ ಹತ್ಯೆಗೆ ನಿರ್ಧರಿಸಿದ್ದೆವು..!

2015ರಲ್ಲಿ ಧಾರವಾಡದಲ್ಲಿ ನಡೆದಿದ್ದ ನಾಡಿನ ಸಾರಸ್ವತ ಲೋಕದ ಮಹಾನ್‌ ಚೇತನ, ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಹಿಂದಿನ ಕಾರಣವನ್ನು ಈಗ ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಬೈಕ್‌ ರೈಡರ್‌ ಹುಬ್ಬಳ್ಳಿಯ ಗಣೇಶ್‌ ಮಿಸ್ಕಿನ್‌ ಹೀಗೆ ಬಹಿರಂಗಪಡಿಸಿದ್ದಾನೆ.

ಹಲವು ದಿನಗಳಿಂದ ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್‌ ಅವರ ಕೊಲೆಗಳನ್ನು ಒಂದೇ ತಂಡ ನಡೆಸಿದೆ ಎಂಬುದಕ್ಕೆ ಪ್ರಬಲ ಸಾಕ್ಷ್ಯವನ್ನು ಎಸ್‌ಐಟಿ ಸಂಗ್ರಹಿಸಿದ್ದು, ಸೈದ್ಧಾಂತಿಕ ಭಿನ್ನಾಭಿಪ್ರಾಯ ಕಾರಣಕ್ಕೆ ಈ ಇಬ್ಬರು ಚಿಂತಕರನ್ನು ಮಹಾರಾಷ್ಟ್ರದ ಮೂಲದ ಅಮೋಲ್‌ ಕಾಳೆ ನೇತೃತ್ವ ತಂಡವು ವ್ಯವಸ್ಥಿತವಾಗಿ ಸಂಚು ರೂಪಿಸಿ ಹತ್ಯೆ ಮಾಡಿದೆ ಎಂಬುದು ಖಚಿತವಾಗಿದೆ.

‘ದೇವರ ವಿಗ್ರಹದ ಮೂತ್ರ ವಿಸರ್ಜನೆ ಮಾಡಿದರೂ ನನಗೇನೂ ಆಗಲಿಲ್ಲ ಎಂದು ಕಲ್ಬುರ್ಗಿ ಹೇಳಿದ್ದರು. ಅವರ ಮಾತು ನಾವು ಆರಾಧಿಸುವ ದೇವರ ಅಸ್ತಿತ್ವವನ್ನೇ ಪ್ರಶ್ನಿಸುವಂತಿತ್ತು. ಇದಲ್ಲದೆ ಅವಕಾಶ ಸಿಕ್ಕಾಗಲೆಲ್ಲ ಬಲಪಂಥೀಯ ವಿಚಾರಗಳನ್ನು ಖಂಡಿಸಿ ತೀವ್ರವಾಗಿ ಭಾಷಣ ಮಾಡುತ್ತಿದ್ದರು. ಕ್ರಮೇಣ ಹಿಂದೂ ಧರ್ಮವನ್ನೇ ಪ್ರತ್ಯೇಕಿಸಲು ಅವರು ಪ್ರತಿಪಾದಿಸತ್ತಿದ್ದರು. ಇವುಗಳಿಂದಲೇ ಕಲ್ಬುರ್ಗಿ ಅವರನ್ನು ನಾವು ಕೊಲೆ ಮಾಡಿದ್ದೆವು’ ಎಂದು ಗಣೇಶ್‌ ಮಿಸ್ಕಿನ್‌ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಎಸ್‌ಐಟಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ವಾಸ್ತವವಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಮೂತ್ರ ವಿಸರ್ಜನೆ ಮಾಡಿರುವ ಸಂಗತಿಯನ್ನು ತಮ್ಮ ಬಳಿ ಹೇಳಿದ್ದರು ಎಂಬುದನ್ನು ಕಲ್ಬುರ್ಗಿ ಅವರು ಉಲ್ಲೇಖಿಸಿದ್ದರು. ಆದರೆ, ಅದನ್ನು ಕಲ್ಬುರ್ಗಿ ಅವರು ಸಮರ್ಥಿಸಿಕೊಂಡರು ಎಂಬಂತೆಯೇ ಭಾವಿಸಿದ್ದ ಆರೋಪಿಗಳು ಕೃತ್ಯ ಎಸಗಿದ್ದರು ಎನ್ನಲಾಗಿದೆ.

ಗೌರಿ ಲಂಕೇಶ್‌ ಹತ್ಯೆ ನಡೆದ ದಿನ ಶೂಟರ್‌ ಪರಶುರಾಮ್‌ ವಾಗ್ಮೋರೆಯನ್ನು ಗೌರಿ ಮನೆಗೆ ಕರೆತಂದಿದ್ದ ಬೈಕನ್ನು ಗಣೇಶ್‌ನೇ ಓಡಿಸಿದ್ದ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ವಿಚಾರಣೆ ವೇಳೆ ಕಲ್ಬುರ್ಗಿ ಹತ್ಯೆ ಬಗ್ಗೆ ಸಹ ಗಣೇಶ್‌ ಹಾಗೂ ಅಮಿತ್‌ ಬದ್ದಿ ಬಹಿರಂಗಪಡಿಸಿದ್ದು, ಈ ಬಗ್ಗೆ ಸಿಐಡಿ ತನಿಖೆ ನಡೆಸಲಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.

ಸೈದ್ಧಾಂತಿಕ ವಿರೋಧದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಪ್ರಗತಿಪರ ಚಿಂತಕರಾದ ನರೇಂದ್ರ ದಾಬೋಲ್ಕರ್‌ ಹಾಗೂ ಗೋವಿಂದ ಪಾನ್ಸರೆ ಹತ್ಯೆ ಕೃತ್ಯಗಳನ್ನು ಯೋಜಿತ ಸಂಚಿನಂತೆ ಯಶಸ್ವಿಗೊಳಿಸಿದ ಬಳಿಕ ಖುಷಿಗೊಂಡ ಗೋವಾ ಮೂಲದ ಧಾರ್ಮಿಕ ಸಂಸ್ಥೆಯು, ಕರ್ನಾಟಕದಲ್ಲೂ ಸೈದ್ಧಾಂತಿಕ ವಿರೋಧಿಗಳ ಹತ್ಯೆಗೆ ಅಮೋಲ್‌ ಕಾಳೆ ಸಾರಥ್ಯದಲ್ಲಿ ತಂಡವನ್ನು ರಚಿಸಿತು. ಬಳಿಕ ರಾಜ್ಯದ ವಿವಿಧ ಹಿಂದೂ ಪರ ಸಂಘಟನೆಗಳ ಸಕ್ರಿಯ ಕಾರ್ಯಕರ್ತರನ್ನು ಸಂಘಟಿಸಿ ಕಾಳೆ ತಂಡವು ಇಬ್ಬರನ್ನೇ ಹತ್ಯೆಗೈದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಚನ ಸಾಹಿತ್ಯದ ಸಂಶೋಧನೆಗಿಳಿದಿದ್ದ ಕಲ್ಬುರ್ಗಿ ಅವರು, ತಮ್ಮ ಅಧ್ಯಯನ ಆಧಾರದ ಮೇಲೆ ಬಲಪಂಥೀಯ ವಿಚಾರಧಾರೆಗಳನ್ನು ಉಗ್ರವಾಗಿ ಟೀಕಿಸುತ್ತಿದ್ದರು. ಮೊದ ಮೊದಲು ನಿರ್ದಿಷ್ಟಸಮುದಾಯದ ಮೇಲೆ ಪರಿಣಾಮ ಬೀರದ ಅವರ ಪ್ರತಿಪಾದನೆ, ದಿನ ಕಳೆದಂತೆ ಬಸವತತ್ವ ವಿಚಾರಧಾರೆಗಳ ಮಠಗಳು ಹಾಗೂ ಕೆಲ ಸಂಘಟನೆಗಳನ್ನು ಒಗ್ಗೂಡಿಸಲು ನೆರವಾಯಿತು. ಉತ್ತರ ಕರ್ನಾಟಕದ ಪ್ರಮುಖ ಮಠವೊಂದು ಸ್ಥಾಪಿಸಿದ ವೀರಶೈವ ಧರ್ಮ ಅಧ್ಯಯನ ಸಂಸ್ಥೆ ಮುಖ್ಯಸ್ಥರಾಗಿ ಸಹ ಅವರು ನೇಮಕವಾಗಿದ್ದರು. ಹೀಗಾಗಿ ಈ ದನಿ ಪ್ರಬಲವಾದರೆ ಹಿಂದೂ ಧರ್ಮದಲ್ಲಿ ಒಡಕು ಮೂಡಬಹುದು ಎಂದು ಭಾವಿಸಿದ ಆರೋಪಿಗಳು, ಕಲ್ಬುರ್ಗಿ ಅವರ ಹತ್ಯೆಗೆ ಸಂಚು ರೂಪಿಸಿದ್ದವು ಎಂದು ಮೂಲಗಳು ಹೇಳಿವೆ.