Asianet Suvarna News Asianet Suvarna News

ಬೆಳಗಾವಿ ಸ್ಫೋಟದ ಹಿಂದೆ ಇದ್ದವರು ಯಾರು..?

ಬೆಳಗಾವಿಯ ಪ್ರಕಾಶ್‌ ಚಿತ್ರಮಂದಿರದ ಹೊರಗೆ 2018ರ ಜನವರಿ 25ರಂದು ಪೆಟ್ರೋಲ್‌ ಬಾಂಬ್‌ ಎಸೆದ ಕೃತ್ಯದ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಸಂಚಿನಲ್ಲಿ ಪಾಲ್ಗೊಂಡಿದ್ದ ಆರೋಪಿಯ ಕೈವಾಡ ಇರುವುದು ಇದೀಗ ಬೆಳಕಿಗೆ ಬಂದಿದೆ.

Gauri Lankesh Murderer Behind Belagavi Petrol Bomb Hurled Case
Author
Bengaluru, First Published Sep 2, 2018, 7:26 AM IST

ಬೆಳಗಾವಿ :  ವಿವಾದಾತ್ಮಕ ‘ಪದ್ಮಾವತ್‌’ ಹಿಂದಿ ಚಿತ್ರ ಪ್ರದರ್ಶನವನ್ನು ವಿರೋಧಿಸಿ ಬೆಳಗಾವಿಯ ಪ್ರಕಾಶ್‌ ಚಿತ್ರಮಂದಿರದ ಹೊರಗೆ 2018ರ ಜನವರಿ 25ರಂದು ಪೆಟ್ರೋಲ್‌ ಬಾಂಬ್‌ ಎಸೆದ ಕೃತ್ಯದ ಹಿಂದೆ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಸಂಚಿನಲ್ಲಿ ಪಾಲ್ಗೊಂಡಿದ್ದ ಆರೋಪಿಯ ಕೈವಾಡ ಬೆಳಕಿಗೆ ಬಂದಿದೆ.

ಗೌರಿ ಲಂಕೇಶ್‌ ಹತ್ಯೆ, ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣ ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಬಂಧಿತರಾದ ಶರದ್‌ ಕಲಾಸ್ಕರ್‌ನ ಕೈವಾಡ ಬೆಳಗಾವಿ ಚಿತ್ರಮಂದಿರದ ಹೊರಗೆ ಪೆಟ್ರೋಲ್‌ ಬಾಂಬ್‌ ಸ್ಫೋಟಿಸಿದ ಪ್ರಕರಣದಲ್ಲಿ ಇದೆ ಎಂದು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ದಾಭೋಲ್ಕರ್‌ ಹತ್ಯೆಗೂ ಬೆಂಗಳೂರಿನ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೂ ನಂಟಿದೆ ಎಂದು ಇತ್ತೀಚೆಗೆ ಸಿಬಿಐ ಹೇಳಿತ್ತು. ಅಲ್ಲದೆ, ಗೌರಿ ಹತ್ಯೆಗೆ ಬಳಸಲಾದ ಬೈಕನ್ನು ಶರದ್‌ ಕಲಾಸ್ಕರ್‌ನ ಮಹಾರಾಷ್ಟ್ರದ ನಿವಾಸದಿಂದ ಇತ್ತೀಚೆಗೆ ಕರ್ನಾಟಕದ ಎಸ್‌ಐಟಿ ವಶಪಡಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆದ ಸ್ಫೋಟದ ಹಿಂದೆ ಇದೇ ಪ್ರಕರಣದ ಆರೋಪಿಯ ಕೈವಾಡ ಇರುವುದಕ್ಕೆ ಮಹತ್ವ ಬಂದಿದೆ.

‘ಈ ಕೃತ್ಯದ ಹಿಂದೆ ಈಗ ದಾಭೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಲಪಂಥೀಯ ಕಾರ್ಯಕರ್ತರಾದ ಶರದ್‌ ಕಲಾಸ್ಕರ್‌, ವೈಭವ ರಾವುತ್‌ ಹಾಗೂ ಸುಧನ್ವ ಗೋಂಧಾಳೇಕರ್‌ ಅವರ ಕೈವಾಡ ಇರುವ ಮಾಹಿತಿ ಲಭಿಸಿದೆ. ಮಹಾರಾಷ್ಟ್ರ ಎಟಿಎಸ್‌ಗೆ ಶರದ್‌ ಕಲಾಸ್ಕರ್‌ನ ಕಂಪ್ಯೂಟರ್‌ ಲಭ್ಯವಾಗಿದ್ದು, ಅದರಲ್ಲಿ ಪುಣೆಯಲ್ಲಿ 2017ರಲ್ಲಿ ನಡೆದ ಸನ್‌ಬರ್ನ್‌ ಸಂಗೀತ ಉತ್ಸವದ ಮೇಲೆ ದಾಳಿ ನಡೆಸುವ ಸಂಚಿನ ವಿವರ ಲಭ್ಯವಾಗಿದೆ. ಇದೇ ವೇಳೆ, ಬೆಳಗಾವಿಯ ಪ್ರಕಾಶ್‌ ಚಿತ್ರಮಂದಿರದ ಮೇಲೆ ದಾಳಿ ನಡೆಸುವಲ್ಲಿ ಹಾಗೂ ಕಲ್ಯಾಣ್‌ನ ಭಾನುಸಾಗರ ಟಾಕೀಸ್‌ ಮೇಲಿನ ದಾಳಿಯಲ್ಲಿ ಕೂಡ ಇವರ ಪಾತ್ರವಿತ್ತು ಎಂದು ಗೊತ್ತಾಗಿದೆ’ ಎಂದು ಎಟಿಎಸ್‌ ವಕೀಲರು ಪುಣೆ ಸತ್ರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬೆಳಗಾವಿಯ ಪ್ರಕಾಶ್‌ ಥಿಯೇಟರ್‌ ಸಿನಿಮಾ ಮಂದಿರ ಹೊರಗಿನ ಸ್ಫೋಟದ ವಿಚಾರಣೆಯನ್ನು ಸ್ಥಳೀಯ ಶಹಾಪುರ ಪೊಲೀಸರು ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಏನಾಗಿತ್ತು? :  ಈ ವರ್ಷದ ಜನವರಿ 25ರಂದು ವಿವಾದಿತ ‘ಪದ್ಮಾವತ್‌’ ಚಿತ್ರ ಬಿಡುಗಡೆಯಾದ ವೇಳೆ ರಾತ್ರಿ 9.30ರ ಸುಮಾರಿಗೆ ಸುಮಾರು 4-5 ಕಿಡಿಗೇಡಿಗಳು ಬೆಳಗಾವಿಯ ಪ್ರಕಾಶ್‌ ಚಿತ್ರಮಂದಿರದ ಹೊರಗೆ ಪೆಟ್ರೋಲ್‌ ಬಾಂಬ್‌ ಎಸೆದು ಹೋಗಿದ್ದರು. ಅದೃಷ್ಟವಶಾತ್‌ ಆಗ ಪ್ರಾಣಹಾನಿ ಉಂಟಾಗಿರಲಿಲ್ಲ. ಚಿತ್ರಮಂದಿರಕ್ಕೆ ಹಾನಿಯಾಗಿತ್ತು.

Follow Us:
Download App:
  • android
  • ios