ಔರಂಗಾಬಾದ್ (ಆ. 20): ಇಂದಿಗೆ ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಹತ್ಯೆಯಾಗಿದ್ದ ಮಹಾರಾಷ್ಟ್ರದ ಮೂಢನಂಬಿಕೆಗಳ ವಿರೋಧಿ ಹೋರಾಟಗಾರ ನರೇಂದ್ರ ದಾಭೋಲ್ಕರ್ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ.

ಪ್ರಕರಣ ಸಂಬಂಧ ಶಿವಸೇನೆಯ ಮಾಜಿ ಕಾರ್ಪೋರೇಟರ್‌ವೊಬ್ಬರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ದಾಭೋಲ್ಕರ್ ಅವರಿಗೆ ಗುಂಡಿಕ್ಕಿದವರಲ್ಲಿ ಒಬ್ಬನು ಎನ್ನಲಾದ ಔರಂಗಾಬಾದ್‌ನ ಸಚಿನ್ ಪ್ರಕಾಶರಾವ್ ಅಂದುರೆ ಎಂಬಾತನನ್ನು
ಶನಿವಾರ ಸಂಜೆಯಷ್ಟೇ ಬಂಧಿಸಲಾಗಿತ್ತು. ಆತ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಜಿಲ್ಲಾ  ನಗರಪಾಲಿಕೆಯ ಮಾಜಿ ಸದಸ್ಯ ಶ್ರೀಕಾಂತ್ ಪಂಗರ್ಕರ್ (40) ಎಂಬಾತನನ್ನು ಶನಿವಾರ ಸಂಜೆಯೇ ಸಿಬಿಐ
ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದಾಭೋಲ್ಕರ್ ಹತ್ಯೆ ಸಂದರ್ಭ ಶ್ರೀಕಾಂತ್ ನನ್ನ ಜತೆಯೇ ಇದ್ದ. ನಾನು ಬೈಕ್ ಚಲಾಯಿಸುತ್ತಿದ್ದರೆ, ನನ್ನ ಹಿಂದೆ ಶ್ರೀಕಾಂತ್ ಕುಳಿತಿದ್ದ ಎಂದು ಅಂದುರೆ ಹೇಳಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಾಂತ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ, ಮತ್ತಷ್ಟು ಮಾಹಿತಿ ಕಲೆಹಾಕಲು ಯತ್ನಿಸುತ್ತಿದ್ದಾರೆ. ಶ್ರೀಕಾಂತ್ ಬಂಧನದಿಂದ ಶಿವಸೇನೆ ತೀವ್ರ ಮುಜುಗರ ಎದುರಿಸುವಂತಾಗಿದೆ.

ಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ್ದ ಸಂದರ್ಭ 2013 ರ ಆ.20 ರಂದು ದಾಭೋಲ್ಕರ್‌ರನ್ನು ಪುಣೆಯ ಓಂಕಾರೇಶ್ವರ ಸೇತುವೆ ಬಳಿ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಈ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
ಆರಂಭದಲ್ಲಿ ಪುಣೆ ಪೊಲೀಸರು ತನಿಖೆ ನಡೆಸಿದ್ದರು. ಹಂತಕರ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿತ್ತು. ಬೆಂಗಳೂರಿನ ಪತ್ರಕರ್ತೆ  ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ವೇಳೆ ಸಿಕ್ಕ
ಮಾಹಿತಿ ಆಧರಿಸಿ ಮಹಾರಾಷ್ಟ್ರದಲ್ಲಿ ದಾಳಿ ನಡೆಸಿದಾಗ ಶಸ್ತ್ರಾಸ್ತ್ರ ಹೊಂದಿದ್ದ ಮೂವರ ಬಂಧನವಾಗಿತ್ತು.

ಬಂಧಿತರು ಅಂದುರೆ ಹೆಸರು ಹೇಳಿದ್ದರು ಎಂದು ಹೇಳಲಾಗಿದೆ.ಈ ನಡುವೆ, ಅಂದುರೆಯನ್ನು ಆ.26 ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ಪುಣೆಯ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎ.ಎಸ್. ಮಜುಂದಾರ್ ಅವರು ಆದೇಶಿಸಿದ್ದಾರೆ.