ಫರೀದಾಬಾದ್‌: ಹರ್ಯಾಣದ ಪಲ್ವಾಲ್‌ ಜಿಲ್ಲೆಯ ಅಸಾವೊಟಿ ಗ್ರಾಮದಲ್ಲಿ ಐದು ವರ್ಷದ ಮಗುವೊಂದನ್ನು ಅಪಹರಿಸಿ, ಭೀಕರ ಅತ್ಯಾಚಾರ ನಡೆಸಿ, ಇರಿದು ಹತ್ಯೆ ಮಾಡಲಾದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಹುಡುಗಿಯ ತಂದೆಯ ಮೇಲಿನ ಹಳೆ ದ್ವೇಷಕ್ಕಾಗಿ ಗುರುವಾರ ರಾತ್ರಿ ವೀರೇಂದ್ರ ಅಲಿಯಾಸ್‌ ಭೋಲು ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ವೀರೇಂದರ್‌ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿಯ ತಂದೆಯ ಟೆಂಟ್‌ ಹೌಸ್‌ನಲ್ಲಿ ವೀರೇಂದರ್‌ ಕೆಲಸ ಮಾಡುತ್ತಿದ್ದ. ಯಾವುದೋ ವಿಷಯಕ್ಕೆ ಸಂಬಂಧಿಸಿ ಅವರಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಆತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದ ಬಳಿಕ ಹತ್ಯೆಮಾಡಿ, ಮೃತದೇಹವನ್ನು ಕಂಟೈನರ್‌ನಲ್ಲಿ ಮುಚ್ಚಿಟ್ಟಿದ್ದ ಎನ್ನಲಾಗಿದೆ.

ಬಾಲಕಿ ಕಾಣದಿದ್ದಾಗ ಹುಡುಕಾಟ ನಡೆಸಿದ್ದ ಕುಟುಂಬಿಕರು ಪೊಲೀಸ್‌ ದೂರು ನೀಡಿದ್ದರು. ಈ ನಡುವೆ, ಸಿಸಿಟಿವಿ ತುಣುಕುಗಳ ಆಧಾರದಲ್ಲಿ ಬಾಲಕಿಯ ಮೃತದೇಹ ಪತ್ತೆಹಚ್ಚಲಾಗಿತ್ತು.