ಕಾಂಗ್ರೆಸ್‌ ಆಳ್ವಿಕೆಯಲ್ಲಿ ರೈತರ ಆತ್ಮಹತ್ಯೆ ಹೆಚ್ಚು

First Published 13, Apr 2018, 7:02 AM IST
Farmers suicide increased in Congress Government
Highlights

ಯಾವ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೋ ಅಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ. ಕಾಂಗ್ರೆಸ್‌ ರೈತ ವಿರೋಧಿ ಪಕ್ಷ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ಆಗ ಅಲ್ಲಿ ಭಾರೀ ಪ್ರಮಾಣದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಬಿಜೆಪಿ ಆಡಳಿತವಿದ್ದು, ರೈತರ ಆತ್ಮಹತ್ಯೆ ಲೆಕ್ಕ ತೆಗೆದು ನೋಡಿ. ಶೇ.30ರಷ್ಟುಕಡಿಮೆಯಾಗಿದೆ. ಇದು ಇಲ್ಲಿ ಮಾತ್ರವಲ್ಲ, ಯಾವುದೇ ರಾಜ್ಯದಲ್ಲಿ ತುಲನೆ ಮಾಡಿದರೂ ಕಾಂಗ್ರೆಸ್‌ ಆಳ್ವಿಕೆಯಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚು.

- ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ

ಗದಗ: ಯಾವ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೋ ಅಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ. ಕಾಂಗ್ರೆಸ್‌ ರೈತ ವಿರೋಧಿ ಪಕ್ಷ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಜಿಲ್ಲೆಯ ಅಬ್ಬಿಗೇರಿಯಲ್ಲಿ ಮುಷ್ಟಿಧಾನ್ಯ ಸಂಗ್ರಹ ಅಭಿಯಾನದ ಸಮಾರೋಪದಲ್ಲಿ ಗುರುವಾರ ಮಾತನಾಡಿದ ಅಮಿತ್‌ ಶಾ, ರೈತರ ಆತ್ಮಹತ್ಯೆ ಪ್ರಕರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಅನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ನೆರೆಯ ಮಹಾರಾಷ್ಟ್ರದಲ್ಲಿ ಈ ಹಿಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಆಗ ಅಲ್ಲಿ ಭಾರೀ ಪ್ರಮಾಣದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅಲ್ಲಿನ ಜನತೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದು, ಈಗ ಅಲ್ಲಿನ ರೈತರ ಆತ್ಮಹತ್ಯೆಗಳ ಸಂಖ್ಯೆಯನ್ನು ತುಲನೆ ಮಾಡಿ ನೋಡಿ. ಆ ರಾಜ್ಯದಲ್ಲೀಗ ರೈತರ ಆತ್ಮಹತ್ಯೆ ಪ್ರಮಾಣ ಶೇ.30ರಷ್ಟುಕಡಿಮೆಯಾಗಿದೆ. ಸತತವಾಗಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ನಡೆದಿರುವ ರೈತ ಆತ್ಮಹತ್ಯೆಗಳ ಸಂಖ್ಯೆ ಮತ್ತು ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ರೈತ ಆತ್ಮಹತ್ಯೆಸಂಖ್ಯೆಯನ್ನು ಹೋಲಿಸಿ ನೋಡಿ ಎಂದ ಅವರು ಎಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿರುತ್ತದೆಯೋ ಅಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿರುತ್ತವೆ, ಎಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆಯೋ ಅಲ್ಲಿ ರೈತರ ಆತ್ಮಹತ್ಯೆ ಕಡಿಮೆ ಇರುತ್ತದೆ ಎಂದರು. ಕರ್ನಾಟಕದಲ್ಲಿ 3,500ಕ್ಕೂ ಹೆಚ್ಚಿನ ರೈತರ ಆತ್ಮಹತ್ಯೆ ಉದಾಹರಿಸಿ ಶಾ ಈ ಪ್ರಶ್ನೆಯನ್ನು ಕಾರ್ಯಕರ್ತರ ಮುಂದಿಟ್ಟರು.

ಮೋದಿ ಸರ್ಕಾರ ರೈತರಿಗಾಗಿ ಹಲವು ಯೋಜನೆ ರೂಪಿಸಿದೆ. ಈ ದೇಶದ ಯಾವುದೇ ರೈತರು ಬೆಳೆದ ಬೆಳೆಗೆ ಒಂದೂವರೆ ಪಟ್ಟು ಹೆಚ್ಚು ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿ ಬಜೆಟ್‌ನಲ್ಲಿ ಯೋಜನೆಯನ್ನೂ ಘೋಷಿಸಿದೆ. ಇನ್ನು ಕೇಂದ್ರ ಸರ್ಕಾರ ನೀರಾವರಿಗಾಗಿ ರಾಜ್ಯಕ್ಕೆ ಸಾಕಷ್ಟುಹಣ ನೀಡಿದೆ. ಆದರೆ, ಅದನ್ನು ಖರ್ಚು ಮಾಡಲು ರಾಜ್ಯ ಸರ್ಕಾರ ಮನಸ್ಸು ಮಾಡಿಲ್ಲ. ಯಾವ ರೀತಿಯಲ್ಲಿ ಕಮಿಷನ್‌ ಪಡೆಯಬೇಕು ಎನ್ನುವ ಚಿಂತನೆಯಲ್ಲೇ ಸರ್ಕಾರ ಕಾಲ ಕಳೆದಿದೆ. ಇದರಿಂದಾಗಿ ರಾಜ್ಯದ ಜನರಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯ ತಪ್ಪಿಸಬೇಕಿದ್ದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಬೇಕು ಎಂದರು.

ರಾಹುಲ್‌ಗೆ ಸಿದ್ದರಾಮಯ್ಯ ಇಂಜೆಕ್ಷನ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದಾಗ ರಾಹುಲ್ ಗಾಂಧಿಗೆ ಅದೇನು ಇಂಜೆಕ್ಷನ್‌ ಕೊಟ್ಟಿದ್ದಾರೋ ಗೊತ್ತಿಲ್ಲ. ಒಮ್ಮಿಂದೊಮ್ಮೆಲೆ ರಾಹುಲ್‌ ಬಾಬಾ ಜೋರಾದ ಧ್ವನಿಯಲ್ಲಿ ನೀವೇನು ಮಾಡಿದ್ದೀರಿ ಲೆಕ್ಕ ಕೊಡಿ ಅಂತ ನಮ್ಮನ್ನು ಕೇಳುತ್ತಾರೆ. ಆದರೆ ನಾವು ಪೈಸೆ ಪೈಸೆ ಲೆಕ್ಕವನ್ನು ಕರ್ನಾಟಕದ ಜನತೆಗೆ ಕೊಡುತ್ತೇವೆಯೇ ಹೊರತು ರಾಹುಲ್‌, ಸಿದ್ದರಾಮಯ್ಯ ಅವರಿಗಲ್ಲ ಎಂದು ಶಾ ವಾಗ್ದಾಳಿ ನಡೆಸಿದರು.

.40 ಲಕ್ಷದ ವಾಚ್‌ ಕೊಡಿಸಿದ್ದ್ಯಾರೆಂದು ಪ್ರಶ್ನಿಸಿ ಎಂದು ಸಿಎಂ ಕಾಲೆಳೆದ ಶಾ!

ಧಾರವಾಡ ಹಾಗೂ ಗದಗ ಜಿಲ್ಲೆಗಳ ಪ್ರವಾಸದ ವೇಳೆ ಅಮಿತ್‌ ಶಾ ಅವರು ಹ್ಯೂಬ್ಲೊಟ್‌ ವಾಚ್‌ ಪ್ರಕರಣವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲೆಳೆದ ಪ್ರಸಂಗವೂ ನಡೆಯಿತು. ಗದಗದ ಅಬ್ಬಿಗೇರಿಯಲ್ಲಿ ಮುಷ್ಟಿಅಕ್ಕಿ ಅಭಿಯಾನದ ಸಮಾರೋಪದಲ್ಲಿ ಮಾತನಾಡಿದ ಶಾ, ನೀವೆಲ್ಲಾದರೂ .40ಲಕ್ಷದ ವಾಚ್‌ ನೋಡಿದ್ದೀರಾ ಎಂದು ನೆರೆದಿದ್ದ ಕಾರ್ಯಕರ್ತರನ್ನು ಪ್ರಶ್ನಿಸಿದರು. ಇದಕ್ಕೆ ಕಾರ್ಯಕರ್ತರಿಂದ ಇಲ್ಲ ಎಂಬ ಉತ್ತರ ಬಂದಾಗ, ಹಾಗಿದ್ದರೆ ಸಿದ್ದರಾಮಯ್ಯ ಅವರ ಕೈ ನೋಡಿ ಗೊತ್ತಾಗುತ್ತದೆ. ಮುಂದೆ ಅವರು ನಿಮಗೆ ಎಲ್ಲಾದರೂ ಎದುರು ಸಿಕ್ಕರೆ ಈ ಗಡಿಯಾರ ಎಲ್ಲಿ ಕೊಂಡಿದ್ದೀರಿ? ಅಥವಾ ಯಾರು ಕೊಡಿಸಿದರು, ಏಕೆ ಕೊಡಿಸಿದರು ಎಂದು ಕೇಳಿ. ಅವರಿಂದ ಏನು ಉತ್ತರ ಬರುತ್ತದೆ ನೋಡಿ ಎಂದು ವ್ಯಂಗ್ಯವಾಡಿದರು.

ಇದಕ್ಕೂ ಮೊದಲು ಧಾರವಾಡದಲ್ಲೂ ಈ ವಿಚಾರ ಪ್ರಸ್ತಾಪಿಸಿದ ಶಾ, ಸಾಮಾನ್ಯ ಜನರಿಗೆ ಇಷ್ಟೊಂದು ಮೌಲ್ಯದ ವಾಚ್‌ನ್ನು ಬಳಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಜತೆಗೆ, ರಾಜ್ಯ ಸರ್ಕಾರ ಕಂಠಪೂರ್ತಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಿಡಿಕಾರಿದ ಅವರು, ‘ನಿದ್ದೆ ಮಾಡುವ ಮುಖ್ಯಮಂತ್ರಿ ಹಾಗೂ ಸರ್ಕಾರವನ್ನು ಕಿತ್ತೊಗೆಯಬೇಕು’ ಎಂದರು.

loader