ನವದೆಹಲಿ[ಅ.18]: ಬಂಗಾಳಿಗಳು ಭಾರತಕ್ಕಾಗಿ ಪ್ರಶಸ್ತಿಗಳನ್ನು ತಂದುಕೊಡದೇ ಇದ್ದರೆ ಅವರನ್ನು ಭಾರತದಿಂದಲೇ ಹೊರಹಾಕುವುದಾಗಿ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಹೇಳಿದ್ದಾರೆಂದು ವರದಿಯಾದ ಪತ್ರಿಕೆಯ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ.

ಪಶ್ಚಿಮ ಬಂಗಾಳದ ಆನಂದ್‌ಬಜಾರ್‌ ದಿನಪತ್ರಿಕೆ ಹೆಸರಿನಲ್ಲಿ ಇಂಥದ್ದೊಂದು ಸುದ್ದಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುತ್ತಿದೆ. ಭಾರತ ಮೂಲಕ ಅಮೆರಿಕನ್‌ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್‌ ಪ್ರಕವಾದ ಬೆನ್ನಲ್ಲೇ ಈ ಸುದ್ದಿ ಹರಿದಾಡುತ್ತಿದೆ.

ಆದರೆ ನಿಜಕ್ಕೂ ಅಮಿತ್‌ ಶಾ ಇಂಥದ್ದೊಂದು ಹೇಳಿಕೆ ನೀಡಿದ್ದರೇ ಎಂದು ಬೂಮ್‌ಲೈವ್‌ ಪರಿಶೀಲಿಸಿದಾಗ ಇದು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವ ಸುದ್ದಿ ಎಂದು ತಿಳಿದುಬಂದಿದೆ. ಆನಂದ್‌ ಬಜಾರ್‌ ಸುದ್ದಿಪತ್ರಿಕೆಯ ವೆಬ್‌ಸೈಟ್‌ ಪರಿಶೀಲಿಸಿದಾಗ ಜನವರಿ 30, 2019ರಂದು ಪ್ರಕಟವಾದ ಸುದ್ದಿಯ ಮೂಲ ಶೀರ್ಷಿಕೆಯನ್ನು ಎಡಿಟ್‌ ಮಾಡಿ ಹೀಗೆ ಸುಳ್ಳು ಸುದ್ದಿ ಹರಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

‘ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ದಿನವೇ ರಾಜ್ಯ ಸರ್ಕಾರ ಬೀಳುತ್ತದೆ: ಅಮಿತ್‌ ಶಾ ’ ಎಂದು ಶೀರ್ಷಿಕೆ ನೀಡಲಾಗಿತ್ತು. ಅಲ್ಲದೆ ವೈರಲ್‌ ಪೋಸ್ಟ್‌ನಲ್ಲಿ ಶಾ ಎಂದು ತಪ್ಪಾಗಿ ಬರೆಯಲಾಗಿದೆ. ಒಟ್ಟಾರೆ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿ ತರದಿದ್ದರೆ ಬಂಗಾಳಿಗಳನ್ನು ದೇಶದಿಂದಲೇ ಹೊರಹಾಕಲಾಗುತ್ತದೆ ಎಂದು ಅಮಿತ್‌ ಶಾ ಎಲ್ಲಿಯೂ ಹೇಳಿಲ್ಲ. ಇದೊಂದು ಸುಳ್ಳುಸುದ್ದಿ.