ಸ್ವೀಡನ್(ಜ. 25): ಫೇಸ್ಬುಕ್'ನಲ್ಲಿ ನೇರ ಪ್ರಸಾರದಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘೋರ ಘಟನೆ ಸ್ವೀಡನ್ ದೇಶದ ಸ್ಟಾಕ್'ಹಾಮ್ ರಾಜ್ಯದಲ್ಲಿ ಘಟಿಸಿದೆ. ಪೊಲೀಸರು ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಏನಿದು ಘಟನೆ?
60 ಸಾವಿರ ಸದಸ್ಯರಿರುವ ಫೇಸ್ಬುಕ್ ಗ್ರೂಪ್'ನಲ್ಲಿ ಆಪಾದಿತರು ಈ ಕೃತ್ಯ ಎಸಗಿದ್ದಾರೆ. ಸ್ಟಾಕ್'ಹಾಮ್'ನ ಉಪ್ಪಸಲ ನಗರದ ಅಪಾರ್ಟ್'ಮೆಂಟ್'ವೊಂದರಲ್ಲಿ ಸುಮಾರು 30 ವರ್ಷದ ಯುವತಿಯನ್ನು ಗನ್'ನಿಂದ ಹೆದರಿಸಿ ಮೂವರು ಕಾಮುಕರು ರೇಪ್ ಮಾಡಿದ್ದಾರೆ. ಫೇಸ್ಬುಕ್ ಲೈವ್'ನಲ್ಲಿ ಪ್ರಸಾರವಾಗುತ್ತಿದ್ದ ಈ ದೃಶ್ಯವನ್ನು ಕಂಡು ಶಾಕ್ ಆದ ಅನೇಕ ಗ್ರೂಪ್ ಸದಸ್ಯರು ಪೊಲೀಸರಿಗೆ ತತ್'ಕ್ಷಣವೇ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಆ ಯುವತಿ ಇದ್ದ ಅಪಾರ್ಟ್'ಮೆಂಟ್'ಗೆ ಹೋಗಿ ಆರೋಪಿಗಳನ್ನು ರೆಡ್'ಹ್ಯಾಂಡಾಗಿ ಹಿಡಿದಿದ್ದಾರೆ.

ಫೇಸ್ಬುಕ್'ನಲ್ಲಿ ಲೈವ್ ಆಗಿ ದೃಶ್ಯ ವೀಕ್ಷಿಸಿದ ಪ್ರತ್ಯಕ್ಷದರ್ಶಿ ಮಹಿಳೆ ಹೇಳುವ ಪ್ರಕಾರ, ಗನ್'ಗಳನ್ನು ಹಿಡಿದಿದ್ದ ಆರೋಪಿಗಳು ಯುವತಿಯನ್ನು ಬೆದರಿಸುತ್ತಾರೆ. ಅವಳ ಬಟ್ಟೆಯನ್ನು ಬಿಚ್ಚಿ ವಿವಸ್ತ್ರಗೊಳಿಸುತ್ತಾರೆ. ನಂತರ ಒಬ್ಬಾತ ಆಕೆಯ ಮೇಲೆ ಎರಗುತ್ತಾನೆ. ಕಾಮುಕರ ಅಟ್ಟಹಾಸದಿಂದ ನಲುಗಿದ ಯುವತಿಯು ಬಹುತೇಕ ಪ್ರಜ್ಞಾಶೂನ್ಯ ಸ್ಥಿತಿ ತಲುಪುತ್ತಾಳೆ. ಕೆಲ ಗಂಟೆಗಳವರೆಗೂ ಈ ಕೃತ್ಯ ಮುಂದುವರಿಯುತ್ತದೆ. ಫೇಸ್ಬುಕ್ ಗ್ರೂಪ್'ನಲ್ಲಿದ್ದವರಲ್ಲಿ ಕೆಲವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಲೈವ್ ಆಗಿ ಪ್ರಸಾರವಾಗುತ್ತಿರುವಂತೆಯೇ ಪೊಲೀಸರು ಸ್ಥಳಕ್ಕೆ ಹೋಗಿ ಸ್ಟ್ರೀಮಿಂಗ್ ಆಫ್ ಮಾಡಿ ಯುವತಿಯನ್ನು ಕಾಪಾಡುತ್ತಾರೆ.