Asianet Suvarna News Asianet Suvarna News

ಅಕ್ರಮ ಸಂಬಂಧ: ಪತ್ನಿಗೆ 22 ಬಾರಿ ಇರಿದು ಕೊಂದ!

ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಕೋಪಗೊಂಡ ಕಾವಲುಗಾರನೊಬ್ಬ, ತನ್ನ ಪತ್ನಿಗೆ 22 ಬಾರಿ ಇರಿದು ಭೀಕರವಾಗಿ ಕೊಂದು ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೆ.ಪಿ.ನಗರದ 1ನೇ ಹಂತದಲ್ಲಿ ಸೋಮವಾರ ಸಂಜೆ ನಡೆದಿದೆ.

Extra Marital RelationShip Husband Kill Wife
Author
Bengaluru, First Published Oct 3, 2018, 9:10 AM IST
  • Facebook
  • Twitter
  • Whatsapp

ಬೆಂಗಳೂರು :  ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಕೋಪಗೊಂಡ ಕಾವಲುಗಾರನೊಬ್ಬ, ತನ್ನ ಪತ್ನಿಗೆ 22 ಬಾರಿ ಇರಿದು ಭೀಕರವಾಗಿ ಕೊಂದು ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೆ.ಪಿ.ನಗರದ 1ನೇ ಹಂತದಲ್ಲಿ ಸೋಮವಾರ ಸಂಜೆ ನಡೆದಿದೆ.

ಇಲ್ಲಿನ ರಾಯಲ್‌ ಕೌಂಟಿ ಲೇಔಟ್‌ನಲ್ಲಿ ನಿವಾಸಿ ಗೀತಾ (33) ಕೊಲೆಯಾದ ಮಹಿಳೆ. ಈ ಘಟನೆ ಸಂಬಂಧ ಮೃತಳ ಪತಿ ಕುಮಾರ್‌ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೌಟುಂಬಿಕ ವಿಷಯವಾಗಿ ದಂಪತಿ ಮಧ್ಯೆ ಸಂಜೆ 6ರ ಸುಮಾರಿಗೆ ಗಲಾಟೆ ನಡೆದಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಕುಮಾರ್‌, ಪತ್ನಿಗೆ ಮನಬಂದಂತೆ 22 ಬಾರಿ ಇರಿದು ಕೊಂದಿದ್ದಾನೆ. ಬಳಿಕ ಅದೇ ಚಾಕುವಿನಿಂದ ತಾನು ಇರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಈ ಚೀರಾಟ ಕೇಳಿ ಜಮಾಯಿಸಿದ ಸ್ಥಳೀಯರು, ರಕ್ತದ ಮಡುವಿನಲ್ಲಿದ್ದ ಕುಮಾರ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಶಕದ ದಾಂಪತ್ಯ:  ಹತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದ ಕುಮಾರ್‌ ಹಾಗೂ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಗೀತಾ ವಿವಾಹವಾಗಿದ್ದು, ದಂಪತಿಗೆ 9 ವರ್ಷದ ಗಂಡು ಮಗನಿದ್ದಾನೆ. ನಾಲ್ಕು ವರ್ಷಗಳಿಂದ ರಾಯಲ್‌ ಕೌಂಟಿ ಲೇಔಟ್‌ನ ‘ಸುಶೀಲಾ ರೆಸಿಡೆನ್ಸಿ’ ಅಪಾರ್ಟ್‌ಮೆಂಟ್‌ನಲ್ಲಿ ಕಾವಲುಗಾರನಾಗಿದ್ದ ಕುಮಾರ್‌, ಅಲ್ಲೇ ಶೆಡ್‌ನಲ್ಲಿ ಪತ್ನಿ ಮತ್ತು ಮಗನ ಜತೆ ನೆಲೆಸಿದ್ದ. ಇತ್ತೀಚಿಗೆ ಕೌಟುಂಟಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿದ್ದು, ಇದೇ ವಿಷಯವಾಗಿ ಆಗಾಗ್ಗೆ ಅವರ ನಡುವೆ ಗಲಾಟೆಗಳು ನಡೆದಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅದರಂತೆ ಸೋಮವಾರ ಸಂಜೆ 6ಕ್ಕೆ ಸುಮಾರಿಗೆ ಮಗ ಟ್ಯೂಷನ್‌ಗೆ ತೆರಳಿದಾಗ ದಂಪತಿ ನಡುವೆ ಮತ್ತೆ ಜಗಳ ಶುರುವಾಗಿದೆ. ಈ ವೇಳೆ ಕೆರಳಿದ ಕುಮಾರ್‌, ಪತ್ನಿ ಹೊಟ್ಟೆ, ತೊಡೆ, ಕುತ್ತಿಗೆ ಭಾಗಕ್ಕೆ ಮನಸೋ ಇಚ್ಛೆ ಇರಿದಿದ್ದಾನೆ. ಬಳಿಕ ತಾನೂ ಹೊಟ್ಟೆಗೆ ಚುಚ್ಚಿಕೊಂಡು ಹೊರ ಬಂದಿದ್ದಾನೆ. ಆತನನ್ನು ಆ ಸ್ಥಿತಿಯಲ್ಲಿ ಕಂಡು ಗಾಬರಿಗೊಂಡ ಕಟ್ಟಡದ ನಿವಾಸಿಗಳು, ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕೋಣನಕುಂಟೆ ಠಾಣೆ ಪೊಲೀಸರು, ಆರೋಪಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಗೀತಾ ದೇಹಕ್ಕೆ 22 ಬಾರಿ ಇರಿಯಲಾಗಿದೆ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಪತ್ನಿ ಬುದ್ಧಿ ಮಾತು ಕೇಳಲಿಲ್ಲ: ಕುಮಾರ್‌

ಕೆಲ ದಿನಗಳಿಂದ ನಮ್ಮ ಪರಿಚಿತ ವ್ಯಕ್ತಿಯೊಬ್ಬನ ಜತೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿದ ನಾನು, ಆತನ ಸ್ನೇಹ ಕಡಿದುಕೊಳ್ಳುವಂತೆ ಬುದ್ಧಿ ಮಾತು ಹೇಳಿದರೂ ಕೇಳಲಿಲ್ಲ. ಇದೇ ವಿಚಾರವಾಗಿ ನಿತ್ಯ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಸೋಮವಾರ ಸಂಜೆ ಅಕ್ರಮ ವಿಷಯವನ್ನು ಪ್ರಶ್ನಿಸಿದ್ದಕ್ಕೆ ಆಕೆ, ನಿನ್ನ ಸಹವಾಸ ಬೇಡ. ಮಗನನ್ನು ಕರೆದುಕೊಂಡು ಮನೆ ಬಿಟ್ಟು ಹೋಗುವುದಾಗಿ ಹೇಳಿದಳು. ಈ ಮಾತಿಗೆ ಸಿಟ್ಟು ಬಂದಿತು. ಆಗ ಚಾಕುವಿನಿಂದ ಇರಿದು ಕೊಂದ ನಂತರ ಭಯ ಶುರುವಾಗಿ ನಾನು ಚುಚ್ಚಿಕೊಂಡೆ ಎಂದು ಕುಮಾರ್‌ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

Follow Us:
Download App:
  • android
  • ios