ಚಾಮರಾಜನಗರ :  ಮಾರಮ್ಮ ದೇವಸ್ಥಾನದ ಟ್ರಸ್ಟ್‌ ಹಾಗೂ ಸಾಲೂರು ಮಠ ಎರಡರ ಮೇಲೂ ಹಿಡಿತ ಸಾಧಿಸಲೆಂದೇ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ ಇಬ್ಬರೂ ಸೇರಿಯೇ ಈ ಸಂಚು ರೂಪಿಸಿದ್ದರು. ಇದಕ್ಕಾಗಿ ಈ ಪ್ರಕರಣದಲ್ಲಿ ಸಾಲೂರು ಮಠದ ಗುರುಸ್ವಾಮೀಜಿ ಅವರನ್ನು ಜೈಲಿಗೆ ಕಳುಹಿಸುವ ಉದ್ದೇಶವೂ ಇಬ್ಬರ ಷಡ್ಯಂತ್ರದ ಭಾಗವಾಗಿತ್ತು ತನಿಖೆ ವೇಳೆ ಬಯಲಾಗಿದೆ.

ಇಮ್ಮಡಿ ಮಹದೇವಸ್ವಾಮಿ ಮತ್ತು ಅಂಬಿಕಾ ಇಬ್ಬರೂ ಶಾಗ್ಯ ಗ್ರಾಮದವರು, ಸಂಬಂಧಿಗಳೂ ಹೌದು. ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತು. ಅಂಬಿಕಾ ತನ್ನ ಗಂಡ ಮಾದೇಶ ಜೊತೆಗೆ ಆಗಾಗ ಸಾಲೂರು ಮಠಕ್ಕೆ ಹೋಗುತ್ತಿದ್ದಳು. ಇದು ಸ್ವಾಮೀಜಿ ಮತ್ತು ಅಂಬಿಕಾ ನಡುವಿನ ಅನೈತಿಕ ಸಂಬಂಧ ಇನ್ನಷ್ಟುಗಟ್ಟಿಯಾಗುವಂತೆ ಮಾಡಿತು. ಕಿಚ್ಚುಗುತ್ತಿ ಮಾರಮ್ಮ ಟ್ರಸ್ಟ್‌ ಮತ್ತು ಸಾಲೂರು ಮಠ ಎರಡನ್ನೂ ತಮ್ಮ ವಶಕ್ಕೆ ಪಡೆದುಕೊಳ್ಳಬೇಕು ಎಂಬ ದುರುದ್ದೇಶ ಇಬ್ಬರಿಗೂ ಇತ್ತು.

"

ಇಬ್ಬರಿಗೂ ಟ್ರಸ್ಟಿಚಿನ್ನಪ್ಪಿ ಗುಂಪಿನವರಿಗೆ ಮತ್ತು ರಾಜಗೋಪುರ ನಿರ್ಮಾಣದ ಕಾರ್ಯದಲ್ಲಿ ಭಾಗವಹಿಸಿದ್ದ ಸಾಲೂರು ಮಠದ ಹಿರಿಯ ಶ್ರೀ ಗುರುಸ್ವಾಮೀಜಿಗೆ ಕೆಟ್ಟಹೆಸರು ತರಬೇಕೆಂಬ ಉದ್ದೇಶ ಇತ್ತು. ವಿಷಪ್ರಾಶನ ಘಟನೆಯಿಂದ ಟ್ರಸ್ಟಿನವರು ಜೈಲು ಪಾಲಾಗುತ್ತಾರೆ. ಆಗ ಟ್ರಸ್ಟ್‌ ತಮ್ಮ ಅಧೀನಕ್ಕೆ ಬರುತ್ತದೆ ಮತ್ತು ಹಿರಿಯ ಶ್ರೀ ಗುರುಸ್ವಾಮಿ ಕೂಡ ಪ್ರಕರಣದಲ್ಲಿ ಜೈಲಿಗೆ ಹೋದರೆ ಸಾಲೂರು ಮಠದ ಅಧಿಕಾರವೂ ನಿರಾಯಾಸವಾಗಿ ದಕ್ಕುತ್ತದೆ ಎಂಬುದು ಇವರ ಉದ್ದೇಶವಾಗಿತ್ತು. ಈ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುವ ಉದ್ದೇಶದಿಂದ ಪ್ರಸಾದಕ್ಕೆ ವಿಷ ಹಾಕುವ ಸಂಚು ರೂಪಿಸಿದ್ದರು.

ಕೃಷಿ ಅಧಿಕಾರಿಯಿಂದ ಔಷಧ ತರಿಸಿದ್ದಳು

ಷಡ್ಯಂತ್ರದ ಭಾಗವಾಗಿ ಮನೆಯ ಗಿಡಗಳಿಗೆ ರೋಗ ಬಂದಿದೆ ಎಂದು ಅಂಬಿಕಾ ಕೃಷಿ ಅಧಿಕಾರಿಯೊಬ್ಬರಿಂದ 500 ಮೀ ಲೀಟರ್‌ನ 2 ಬಾಟಲಿ ಮನೋಕ್ರೋಟಾಫಾಸ್‌ ಕೀಟನಾಶಕ ತರಿಸಿ ಇಟ್ಟುಕೊಂಡಿದ್ದಳು. ಡಿ.14ರಂದು ದೇವನಸ್ಥಾನದ ನಾಗರಕಲ್ಲಿನ ಆರ್ಚಕನಾಗಿದ್ದ ದೊಡ್ಡಯ್ಯ ತಂಬಡಿ ಮೂಲಕ ಟೊಮೆಟೋ ಬಾತ್‌ಗೆ ಅದನ್ನು ಬೆರೆಸುವಂತೆ ಸೂಚಿಸಿದ್ದಳು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪಕ ಮಾದೇಶ ಅಡುಗೆಯವರನ್ನು ಬೇರಡೆಗೆ ಕಳುಹಿಸಿದ್ದ.

ಪಚ್ಚ ಕರ್ಪೂರ ಜಾಸ್ತಿಯಾಗಿದೆ ತಿನ್ನಿ

ರಾಜಗೋಪುರ ಗುದ್ದಲಿ ಪೂಜೆ ಸಂದರ್ಭದಲ್ಲಿ ದೇವಸ್ಥಾನದಲ್ಲಿದ್ದ ಭಕ್ತರು ಪ್ರಸಾದ ವಾಸನೆ ಬರುತ್ತಿದೆ ಎಂದು ಹೇಳಿದಾಗ ಮಾದೇಶ, ಪಚ್ಚ ಕರ್ಪೂರ ಹಾಕಿದ್ದೆವು. ಏನೂ ಆಗುವುದಿಲ್ಲ ತಿನ್ನಿ ಎಂದು ಹೇಳಿದ್ದ.

ಟ್ರಸ್ಟ್‌ನವರು ಮನೆ ತಿಂಡಿ ತಿಂದಿದ್ದರು:  ದೇವಾಲಯದ ಟ್ರಸ್ಟ್‌ ಪದಾಧಿಕಾರಿಗಳು ತಮ್ಮ ಮನೆಯಿಂದಲೇ ಇಡ್ಲಿ ಮತ್ತು ಪೊಂಗಲ್‌ ತಂದಿದ್ದರು. ರಾಜಗೋಪುರ ಗುದ್ದಲಿ ಪೂಜೆ ಬಳಿಕ ತಾವು ತಂದಿದ್ದ ತಿಂಡಿ ತಿಂದಿದ್ದರು.