Asianet Suvarna News Asianet Suvarna News

ಮರೆಯಲಾಗದ ಮಾಣಿಕ್ಯ ರಾಜ್; ವರನಟನ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್ ಸತ್ಯಗಳು

ಏಪ್ರಿಲ್ 24 ವರನಟ ಡಾ॥ ರಾಜ್‌ಕುಮಾರ್ ಅವರ 89 ನೇ ಜನ್ಮದಿನದ ಸಂಭ್ರಮಾಚರಣೆ. ಡಾ॥ ರಾಜ್ ಅಮರರಾದ ಏಪ್ರಿಲ್-12 ರಿಂದಲೇ ರಾಜಸ್ಮರಣೆ ಮಾಡಲಾಗಿದೆ.    

Dr. Rajkumar Kumar Birthday Special

# ಸದಾಶಿವನಗರದಲ್ಲಿರುವ ರಾಜ್‌ಕುಮಾರ್ ಮನೆಗೆ ಯಾರೇ ಹೋದರೂ, ಅವರನ್ನು ಬಳಿಗೆ ಕರೆದು, ಅವರಿಗೆ ರಾಜ್ ತಾವೇ ಸಿಹಿ ತಿನ್ನಿಸುತ್ತಿದ್ದರು ಅನ್ನುವ ಮಾತು ಸುಳ್ಳಲ್ಲ. ಯಾರಾದರೂ ಮನೆಗೆ ಹೋದರೆ ಹಜಾರದಲ್ಲಿ ಕೂತು ಭೈರಪ್ಪನವರ ನಿರಾಕರಣ ಕಾದಂಬರಿಯನ್ನು ಓದುತ್ತಾ ಕುಳಿತಿದ್ದ ಅಣ್ಣಾವ್ರ ಕಾಣಿಸುತ್ತಿದ್ದರು. ಬಂದವರಿಗೆ ಸಿಹಿ ತಿನ್ನಿಸಿ, ಬಾಯ್ತುಂಬ ಮಾತಾಡುತ್ತಿದ್ದರು. ತಮ್ಮ ಎದುರು ಕುಳಿತವರೊಳಗೆ ಸೀದಾ ಪ್ರವೇಶಿಸಿಬಿಡುತ್ತಿದ್ದರು. ಅವರೊಳಗೆ ಒಂದಾಗುತ್ತಿದ್ದರು. ಒಂದರ್ಧ ಗಂಟೆ ಅವರ ಜೊತೆ ಮಾತಾಡುತ್ತಾ ಕೂತಿದ್ದರೆ ಅವರು ಸೂಪರ್‌ಸ್ಟಾರು ಅನ್ನುವ ಅಂಜಿಕೆ ಮರೆಯಾಗುತ್ತಿತ್ತು. ಅವರು ಯಾವತ್ತೂ ವಂದಿಮಾಗಧರ ಜೊತೆ ಕಾಣಿಸಿಕೊಳ್ಳಲೇ ಇಲ್ಲ. ಒಬ್ಬರೇ ಇರುವುದು ಅವರಿಗೆ ಸಾಧ್ಯವಾಗಿತ್ತು. ಮನೆಯಲ್ಲಿದ್ದಾಗ ಅವರು ಎಷ್ಟೋ ಸಲ ನೆಲದ ಮೇಲೆಯೇ ಚಕ್ಕಳಮಕ್ಕಳ ಹಾಕಿಕೊಂಡು ಕೂತಿರುತ್ತಿದ್ದರು. 

# ರಾಜ್‌ಕುಮಾರ್ ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದರು. ಪ್ರೀತಿಯಿಂದ ಅಣ್ಣ ಎಂದೇ ಕರೆಯುತ್ತಿದ್ದರು. ಕ್ರಮೇಣ ಅವರು ಅಣ್ಣಾವ್ರ ಆದರು. ಅಣ್ಣ ಅಣ್ಣಾವ್ರ ಆದ ಮೇಲೂ ಪ್ರೀತಿ ಹಾಗೆಯೇ ಇತ್ತು. ಅಭಿಮಾನಿಗಳನ್ನು ಅವರು ದೇವರು ಅನ್ನುತ್ತಿದ್ದರು. ಇವತ್ತು ನಮ್ಮ ಸೂಪರ್‌ಸ್ಟಾರುಗಳನ್ನು ಅವರ ಅಭಿಮಾನಿಗಳು ಬಾಸ್ ಅನ್ನುತ್ತಾರೆ. ಅಣ್ಣ ಅನ್ನುವುದರಲ್ಲಿರುವ ಆಪ್ತತೆ, ಬಾಸ್ ಎಂಬ ಪದದಲ್ಲಿ
ಇದ್ದಂತಿಲ್ಲ. ಈಗ ಬಾಸ್ ಅನ್ನಿಸಿಕೊಳ್ಳುವುದರಲ್ಲೇ ಎಲ್ಲರಿಗೂ ಆಸಕ್ತಿ. ಅಣ್ಣಾವ್ರನ್ನು ಯಾರು ಬೇಕಿದ್ದರೂ ನೋಡಬಹುದಾಗಿತ್ತು. ಅವರು ಕೊನೆಯ ದಿನಗಳ ತನಕವೂ ಮನೆಗೆ ಬಂದವರಿಗೆ ಸಿಗುತ್ತಿದ್ದರು. ವಾಕಿಂಗಿನಲ್ಲಿ ಎದುರಾಗುತ್ತಿದ್ದರು. ಮೈದಡವಿ ಮಾತಾಡಿಸುತ್ತಿದ್ದರು. ಅವರ ಸುತ್ತ ಯಾವ ಬೌನ್ಸರುಗಳೂ ರಕ್ಷಕ ಮಹಾಶಯರೂ ಇರುತ್ತಿರಲಿಲ್ಲ. 

# ರಾಜ್‌ಕುಮಾರ್ ಸಿನಿಮಾಗಳ ಬಜೆಟ್ಟು ಒಂದು ಲಕ್ಷ ಇದ್ದರೆ, ಗಳಿಗೆ ಹತ್ತು ಲಕ್ಷ ಇರುತ್ತಿತ್ತು. ಸೂಪರ್ ಹಿಟ್ ಚಿತ್ರವಾದರೆ ಇದು ನೂರು ಪಟ್ಟಾಗುತ್ತಿತ್ತು. ಈ ಅನುಪಾತವನ್ನು ಅವರು ಕೊನೆಯ ತನಕವೂ ಕಾಪಾಡಿಕೊಂಡು ಬಂದಿದ್ದರು. ಖರ್ಚಿನ ಹತ್ತುಪಟ್ಟು ದುಡಿಯುತ್ತಿದ್ದ ಚಿತ್ರಗಳನ್ನು ಕೊಟ್ಟ ನಟರು ಭಾರತದಲ್ಲಿ ಬೆರಳೆಣಿಕೆಯ ಮಂದಿ ಇದ್ದರೆ ಹೆಚ್ಚು. ಇವತ್ತು ಸೂಪರ್‌ಸ್ಟಾರುಗಳ ಸಿನಿಮಾಕ್ಕೆ 20 ಕೋಟಿ ಖರ್ಚು ತಗಲುತ್ತದೆ. ಚಿತ್ರ ಇಪ್ಪತ್ತೊಂದೋ ಇಪ್ಪತೈರಡೋ ಕೋಟಿ ಗಳಿಸಲು ಹೆಣಗಾಡುತ್ತಿರುತ್ತದೆ.

# ರಾಜ್‌ಕುಮಾರ್ ಸಿನಿಮಾಗಳ ನಾಯಕ ಆರಂಭದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಾಗಿರುತ್ತಿದ್ದ. ಕತೆ ಹಾಗೂ ಸನ್ನಿವೇಶಗಳು ನಾಯಕನನ್ನು ಬೆಳೆಸುತ್ತಿದ್ದವು. ಹೋಟೆಲ್ ಮಾಣಿ, ಗುಮಾಸ್ತ, ಗಾಯಕ, ಕೂಲಿ, ಕೃಷಿಕ, ಕುಂಬಾರ- ಹೀಗೆ ಜನಸಾಮಾನ್ಯರ ವೃತ್ತಿಯೇ ನಾಯಕನ ವೃತ್ತಿಯೇ ಆಗಿರುತ್ತಿತ್ತು. ಅದಕ್ಕೆ ತಕ್ಕ ವೇಷಭೂಷಣಗಳನ್ನು ರಾಜ್ ತೊಡುತ್ತಿದ್ದರು. 

# ರಂಗಭೂಮಿಯ ಮೂಲಗುಣವಾದ ಸಹಬಾಳ್ನೆ ರಾಜ್ ಚಿತ್ರತಂಡದ ಜೀವಾಳ ಆಗಿತ್ತು. ಅವರ ಸಿನಿಮಾಗಳಲ್ಲಿ ಮತ್ತೆ ಮತ್ತೆ ಅದೇ ಕಲಾವಿದರು ಕಾಣಿಸಿಕೊಳ್ಳುತ್ತಿದ್ದರು. ಕತೆ ಬದಲಾಗುತ್ತಿತ್ತು. ಪಾತ್ರಗಳು ಬದಲಾಗುತ್ತಿದ್ದವು. ಪಾತ್ರಧಾರಿಗಳು ಅವರವರೇ ಇರುತ್ತಿದ್ದರು. ಹೀಗಾಗಿ ಪೋಷಕ ಕಲಾವಿದರಿಗೆ ಒಂದು ರೀತಿಯಲ್ಲಿ ಅದು ಪರ್ಮನೆಂಟ್ ಕೆಲಸ ಕೊಡುವ ಸಂಸ್ಥೆಯಾಗಿತ್ತು.

# ರಾಜ್ ಚಿತ್ರತಂಡದಲ್ಲಿ ಎಲ್ಲರೂ ಜೊತೆಗಿರುತ್ತಿದ್ದರು. ಮಧ್ಯಾಹ್ನ ಎಲ್ಲರೂ ಜೊತೆಗೇ ಕೂತು ಸಹಭೋಜನ ಮಾಡುತ್ತಿದ್ದರು. ಎಲ್ಲರೂ ಮಾಡುವ ಊಟವನ್ನೇ ರಾಜ್ ಕೂಡ ತಿನ್ನುತ್ತಿದ್ದರು. ಇವತ್ತು ಸ್ಟಾರ್‌ಗಳು ಕ್ಯಾರವಾನ್ ಒಳಗೆ ಕೂತಿರುತ್ತಾರೆ. ಅವರಿಗೆ ಬೇರೆಯೇ ಊಟ ಬರುತ್ತದೆ.  ರಾಜ್ ಸಿನಿಮಾಗಳು ಬಿಡುಗಡೆಯಾದರೆ ಎಲ್ಲರಿಗೂ ಹಬ್ಬ. ಥಿಯೇಟರ್ ಮಾಲಿಕ, ಹಂಚಿಕೆದಾರ, ಸೈಕಲ್ ಸ್ಟಾಂಡ್‌ನ ಹುಡುಗ, ಗೇಟ್‌ಕೀಪರ್, ಥೇಟರಿನಲ್ಲಿ ಕಡ್ಲೆಕಾಯಿ ಮಾರುವ ಬಾಲಕ, ಪೋಸ್ಟರ್ ಅಂಟಿಸುವಾತ- ಎಲ್ಲರಿಗೂ ಆ ಗೆಲುವಿನ ಒಂದು ಪಾಲು ಸಲ್ಲಿಕೆ ಆಗುತ್ತಿತ್ತು. 

# ಮೊದಲು ಕಾದಂಬರಿ ಓದಿ, ಚರ್ಚಿಸಿ, ನಂತರ ಆ ಪಾತ್ರವನ್ನು ಮೈಗೂಡಿಸಿಕೊಂಡು ರಾಜ್ ಸಿನಿಮಾ ಮಾಡುತ್ತಿದ್ದರು. ಇವತ್ತು ಸ್ಟಾರ್ ಯಾರೆಂದು ನಿರ್ಧರಿಸಿ, ಅವನಿಗೆ ತಕ್ಕಂಥ ಕತೆ ಬರೆದು, ಸ್ಟಾರ್ ಒಪ್ಪಿಗೆ ಪಡೆದು, ಬೇಕಾದಂತೆ
ಬದಲಾಯಿಸಿ ಸಿನಿಮಾ ಮಾಡಲಾಗುತ್ತದೆ. ಪಾತ್ರಕ್ಕೆ ಒಗ್ಗುವ ಕಲಾವಿದನಿಗೆ ಬದಲಾಗಿದೆ ಕಲಾವಿದನಿಗೆ ತಕ್ಕಂತೆ ಕತೆಯನ್ನು ಮಾರ್ಪಡಿಸುವ ಹೊಸ ಸಂಪ್ರದಾಯ ಆರಂಭವಾಗಿದೆ.

# ರಾಜ್ ನಿರ್ದೇಶಕರಿಗೆ ಹೆಚ್ಚಿನ ಗೌರವ ಕೊಡುತ್ತಿದ್ದರು. ಕತೆಗಾರರನ್ನು ಚಿತ್ರಕತೆಗಾರರನ್ನು ಸಂಗೀತ ನಿರ್ದೇಶಕರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಪ್ರತಿಭೆಯನ್ನು ಗೌರವಿಸುತ್ತಿದ್ದರು.  ರಾಜ್ ಸಿನಿಮಾಗಳು ಕೇವಲ ಮನರಂಜನೆಯಷ್ಟೇ ಆಗಿರಲಿಲ್ಲ. ಅವುಗಳು ಮೌಲ್ಯಗಳನ್ನು ತಮ್ಮೊಳಗೆ ಹುದುಗಿಟ್ಟುಕೊಂಡ ಕೃತಿಗಳೂ ಆಗಿರುತ್ತಿದ್ದವು. 

Follow Us:
Download App:
  • android
  • ios