ವಾಷಿಂಗ್ಟನ್(ಫೆ.06): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಂದ್ರೆ ಸುಮ್ನೆನಾ?. ವಿಶ್ವದ ಬಲಾಢ್ಯ ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಟ್ರಂಪ್, ಮನಸ್ಸಿಗೆ ಬಂದಿದ್ದನ್ನು ಮಾಡಬಹುದು. 

ಅದರಂತೆ ಇಷ್ಟ ಆಯ್ತು ಅಂತಾ ಭೂತಾನ್ ಮತ್ತು ನೇಪಾಳ ರಾಷ್ಟ್ರಗಳನ್ನು ಟ್ರಂಪ್ ಭಾರತಕ್ಕೆ ಸೇರಿಸಿದ್ದಾರೆ. ಅರೆ! ಟ್ರಂಪ್ ಹೇಗೆ ಈ ರಾಷ್ಟ್ರಗಳನ್ನು ಭಾರತಕ್ಕೆ ಸೇರಿಸಿದರು?। ಅಷ್ಟಕ್ಕೂ ಅವರಿಗೆ ಇಷ್ಟೊಂದು ಅಧಿಕಾರ ಇದೆಯೇ ಅಂತಾ ಗೊಂದಲವೇ?.

ಅಸಲಿಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೆ ಭೂತಾನ್ ಮತ್ತು ನೇಪಾಳ ಎರಡು ಸ್ವತಂತ್ರ ರಾಷ್ಟ್ರಗಳು ಎಂಬುದೇ ಗೊತ್ತಿರಲಿಲ್ವಂತೆ. ಹಿಂದೊಮ್ಮೆ ಟ್ರಂಪ್ ಸಲಹೆಗಾರರು ದಕ್ಷಿಣ ಏಷ್ಯಾದ ನಕ್ಷೆ ಪ್ರಮುಖವಾಗಿ ಅಫ್ಘಾನಿಸ್ತಾನದಿಂದ ಬಾಂಗ್ಲಾದೇಶದವರೆಗಿನ ನಕ್ಷೆಯನ್ನು ತೋರಿಸುತ್ತಿರಬೇಕಾದರೆ, ಭಾರತ ನಕ್ಷೆಯತ್ತ ಬೊಟ್ಟು ಮಾಡಿದ ಟ್ರಂಪ್ ‘ನೇಪಾಳ ಹಾಗೂ ಭೂತಾನ್ ಭಾರತದ ಭಾಗವಾಗಿರೋದು ನನಗೆ ಗೊತ್ತು’ ಎಂದು ಹೇಳಿದ್ದರಂತೆ.

ಇದರಿಂದ ಹೌಹಾರಿದ ಟ್ರಂಪ್ ಸಲಹೆಗಾರರು ಅಯ್ಯಯ್ಯೋ ಇಲ್ಲಾ ಸರ್..ಅವರೆಡು ಸ್ವತಂತ್ರ ರಾಷ್ಟ್ರಗಳು ಎಂದು ಸಮಜಾಯಿಷಿ ನೀಡಿದ್ದರಂತೆ. ಇಷ್ಟೇ ಅಲ್ಲದೇ ಕಳೆದ ಆಗಸ್ಟ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಮುನ್ನ, ನೇಪಾಳವನ್ನು ‘ನಿಪ್ಪಲ್’ ಎಂದೂ ಹಾಗೂ ಭೂತಾನವನ್ನು ‘ಬಟ್ಟನ್’ ಎಂದು ಸಂಭೋಧಿಸಿ ಟ್ರಂಪ್ ನಗೆಪಾಟಲಿಗೆ ಈಡಾಗಿದ್ದರು ಎಂಬ ಸುದ್ದಿ ಇದೀಗ ಹೊರ ಬಿದ್ದಿದೆ.

ಇನ್ನು ವಾಷಿಂಗ್ಟನ್ ಡಿಸಿಯಲ್ಲಿ ಮಧ್ಯಾಹ್ನವಾದಾಗ ಅನ್ಯ ರಾಷ್ಟ್ರಗಳಲ್ಲಿ ಯಾವ ಸಮಯವಾಗಿರುತ್ತದೆ ಎಂಬುದೂ ಗೊತ್ತಿಲ್ಲದ ಟ್ರಂಪ್, ಕೆಲವೊಮ್ಮೆ ನಡುರಾತ್ರಿ ವಿದೇಶಿ ನಾಯಕರುಗಳಿಗೆ ಕರೆ ಮಾಡಿ ಅವರ ನಿದ್ರಾಭಂಗ ಮಾಡಿದ್ದಾರಂತೆ.

ಅಲ್ಲದೇ ಟ್ರಂಪ್ ಮತ್ತು ಅಮೆರಿಕದ ಗುಪ್ತಚರ ಸಂಸ್ಥೆಗಳ ಮಧ್ಯೆ ಸಂಬಂಧ ಸರಿಯಿಲ್ಲ ಎಂಬ ಆಘಾತಕಾರಿ ಮಾಹಿತಿಯೂ ಹೊರ ಬಿದ್ದಿದೆ. ಟ್ರಂಪ್ ವಿದೇಶಾಂಗ ನೀತಿಯನ್ನು ವಿರೋಧಿಸುತ್ತಿರುವ ಅಧಿಕಾರಿಗಳು ಒಂದೆಡೆಯಾದರೆ, ಅವರನ್ನು ಹುದ್ದೆಯಿಂದ ವಜಾಗೊಳಿಸುವ ಇರಾದೆಯನ್ನು ಟ್ರಂಪ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.