ಭೋಪಾಲ್ : ನಾಯಿ ಎಂದರೆ ನಿಷ್ಠೆಗೆ ಹೆಸರಾದ ಪ್ರಾಣಿ. ಅದೇ ರೀತಿ ಈ ನಿಷ್ಠಾವಂತ ಪ್ರಾಣಿಯು ಮಹಿಳೆಯೋರ್ವರನ್ನು ಕಾಮುಕನಿಂದ ಕಾಪಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.  

29 ವರ್ಷದ  ಮಹಿಳೆ ಭಾನುವಾರ ಮಧ್ಯಾಹ್ನದ ವೇಳೆ ಚೋಲಾ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿದ್ದಾಗ ಏಕಾ ಏಕಿ ನುಗ್ಗಿದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ.

ಆಗ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದು, ಮನೆಯ ಬಳಿಯೇ ಇದ್ದ ನಾಯಿ ಶೇರು ಓಡಿ ಬಂದು ಅತ್ಯಾಚಾರ ಎಸಗಲು ಯತ್ನಿಸಿದ ವ್ಯಕ್ತಿ ಮೇಲೆ ದಾಳಿ ಮಾಡಿದೆ.  

ಏಕಾಏಕಿ ನಾಯಿಯ ದಾಳಿಯಿಂದ ಕಂಗೆಟ್ಟ ಆತ  ಮಹಿಳೆಯನ್ನು ಬಿಟ್ಟು ನಾಯಿ ಮೇಲೆ ಚಾಕುವಿನಿಂದ ದಾಳಿ ಮಾಡಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ನಾಯಿ ಮುಂದಿನ ಕಾಲಿಗೆ ಗಂಭೀರ ಗಾಯವಾಗಿದೆ.  ಇದೀಗ ನಾಯಿಗೆ ಚಿಕಿತ್ಸೆ ನೀಡಲಾಗಿದೆ.

ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆತ ಮಹಿಳೆಯ ಪಕ್ಕದ ಮನೆಯ ನಿವಾಸಿ ಎನ್ನುವುದು ತಿಳಿದು ಬಂದಿದೆ.  ಸದ್ಯ ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. 

ಮಹಿಳೆಯನ್ನು  ಕಾಪಾಡಿದ್ದು ಬೀದಿ ನಾಯಿಯಾಗಿದ್ದು ಅದಕ್ಕೆ ಮಹಿಳೆ ನಿತ್ಯ ಊಟ ನೀಡಿ ಸಲಹುತ್ತಿದ್ದಳು. ಆಕೆ ಅಪಾಯದಲ್ಲಿದ್ದ ವೇಳೆ ರಕ್ಷಿಸಿ ತನ್ನ ನಿಯತ್ತು ತೋರಿಸಿದೆ.