ಇಂಧೋರ್(ಜ.16): ರಾಜ್ಯದಲ್ಲಿ ಆಪರೇಶನ್ ಸಂಕ್ರಾಂತಿ ಠುಸ್ ಆಗ್ತಿದ್ದಂತೇ ಬಿಜೆಪಿ ತನ್ನ ಆಪರೇಶನ್ ಕಮಲವನ್ನು ಮಧ್ಯಪ್ರದೇಶಕ್ಕೆ ಶಿಫ್ಟ್ ಮಾಡಿರುವ ಸಾಧ್ಯತೆ ಕಂಡು ಬರುತ್ತಿದೆ.

ಮಧ್ಯಪ್ರದೇಶದಲ್ಲಿ ಇತ್ತೀಚಿಗಷ್ಟೇ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಕಾಂಗ್ರೆಸ್‌ನ ಕೆಲವು ಶಾಸಕರನ್ನು ಸೆಳೆದು ಸರ್ಕಾರ ಬೀಳಿಸಲು ಬಿಜೆಪಿ ತಂತ್ರ ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 114, ಬಿಜೆಪಿ 109, ಬಿಎಸ್‌ಪಿ 2, ಎಸ್‌ಪಿ 1 ಹಾಗೂ ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದಾರೆ.

ಸರಳ ಬಹುಮತ ಇರದ ಪರಿಣಾಮ ಕಾಂಗ್ರೆಸ್ ಪಕ್ಷ ಪಕ್ಷೇತರ, ಎಸ್‌ಪಿ ಮತ್ತು ಬಿಎಸ್‌ಪಿ ಮತ್ತು ಪಕ್ಷೇತರರ ಬೆಂಬಲದೊಂದಿಗೆ(114+2+1+4=121)ಆಡಳಿತ ನಡೆಸುತ್ತಿದೆ.

ಇನ್ನು ಬಿಜೆಪಿ ಕೂಡ 109 ಸ್ಥಾನ ಗಳಿಸಿ ಸರ್ಕಾರ ರಚಿಸಲು ವಿಫಲವಾಗಿತ್ತು. ಆದರೆ ರಾಜ್ಯದಲ್ಲಿ ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ತಂತ್ರಕ್ಕೆ ಬಿಜೆಪಿ ಕೈ ಹಾಕಿದೆ ಎಂಬ ಅನುಮಾನ ಶುರುವಾಗಿದೆ. 

ಪಕ್ಷೇತರರು ಮತ್ತು ಕೆಲವು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸುತ್ತಿದೆ ಎಂಬ ಭಯ ಕಾಂಗ್ರೆಸ್‌ಗೆ ಶುರುವಾಗಿದೆ.

ಇದೇ ಕಾರಣಕ್ಕೆ ಶಾಸಕರು ಮತ್ತು ಸಚಿವರನ್ನು ಭದ್ರವಾಗಿಟ್ಟುಕೊಳ್ಳುವಂತೆ ಹೈಕಮಾಂಡ್ ಕೂಡ ಕಮಲನಾಥ್‌ಗೆ ಸೂಚನೆ ನೀಡಿದೆ ಎನ್ನಲಾಗಿದೆ.