ಮುನ್ನೋಟ 2025: ಈ ವರ್ಷ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನೇನಾಗುತ್ತೆ ಗೊತ್ತಾ?

2025ರ ಮೊದಲ ತ್ರೈಮಾಸಿಕದಲ್ಲಿ ಇಸ್ರೋ ತನ್ನ ಮಾನವ ಸಹಿತ ಗಗನಯಾನ ನೌಕೆಯ ಮೊದಲ ಉಡ್ಡಯನಕ್ಕೆ ಉದ್ದೇಶಿಸಿದೆ. ಇದು ಯಶಸ್ವಿಯಾದರೆ 2ನೇ ತ್ರೈಮಾಸಿಕದಲ್ಲಿ 2ನೇ ಸುತ್ತಿನ ಮಾನವ ರಹಿತ ಗಗನಯಾನದ ಪ್ರಯೋಗ ನಡೆಸಲಿದೆ. 

Do You Know What Will Happen State National and International This Year gvd

ಪ್ರಯಾಗ್‌ರಾಜ್‌ನಲ್ಲಿ ಈ ಬಾರಿ ಸಂಭ್ರಮದ ಕುಂಭಮೇಳ: 12 ವರ್ಷಗಳಿಗೊಮ್ಮೆ ಉತ್ತರಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುವ ಐತಿಹಾಸಿಕ ಕುಂಭ ಮೇಳ 2025ರ ಜನವರಿಯಲ್ಲಿ ನಡೆಯಲಿದೆ. ಜ.13ರಂದು ಕುಂಭಮೇಳಕ್ಕೆ ಚಾಲನೆ ಸಿಗಲಿದ್ದು, ವಿಶ್ವದ ವಿವಿಧ ರಾಷ್ಟ್ರಗಳ ಕೋಟ್ಯಂತರ ಹಿಂದೂಗಳು ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದ್ದಾರೆ. ಕುಂಭಮೇಳವು ವಿಶ್ವದಲ್ಲೇ ಒಂದು ಸ್ಥಳದಲ್ಲಿನ ಅತಿದೊಡ್ಡ ಜನರ ಸಮಾಗಮ ಎಂಬ ದಾಖಲೆ ಹೊಂದಿದೆ. ಫೆ.26ರವರೆಗೂ ಕುಂಭಮೇಳ ನಡೆಯಲಿದೆ.

ದೆಹಲಿ, ಬಿಹಾರ ವಿಧಾನಸಭೆಗೆ ಈ ವರ್ಷ ಕಾವೇರಿದ ಎಲೆಕ್ಷನ್‌: ಜನವರಿ ತಿಂಗಳಲ್ಲಿ ದೆಹಲಿ ವಿಧಾನಸಭೆಯ 70 ಸ್ಥಾನಕ್ಕೆ ಮತ್ತು ಅಕ್ಟೋಬರ್‌- ನವೆಂಬರ್‌ ತಿಂಗಳಲ್ಲಿ 243 ಸದಸ್ಯಬಲದ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ದೆಹಲಿಯಲ್ಲಿ ಈಗಾಗಲೇ ಸತತ 3 ಬಾರಿ ಗೆದ್ದು ಅಧಿಕಾರದಲ್ಲಿರುವ ಆಮ್‌ಆದ್ಮಿ ಪಕ್ಷ 4ನೇ ಅವಧಿಗೆ ಹೆಜ್ಜೆ ಇಟ್ಟಿದೆ. ಇನ್ನೊಂದೆಡೆ ಬಿಹಾರದಲ್ಲಿ ಬಿಜೆಪಿ- ಜೆಡಿಯು ಮೈತ್ರಿಕೂಟಕ್ಕೆ ಕಾಂಗ್ರೆಸ್‌, ಆರ್‌ಜೆಡಿ ಮೈತ್ರಿಕೂಟ ಸಡ್ಡು ಹೊಡೆಯಲು ಸಜ್ಜಾಗಿವೆ.

ಇಸ್ರೋದಿಂದ ಮಾನವ ರಹಿತ, ಮಾನವ ಸಹಿತ ಗಗನಯಾನ: 2025ರ ಮೊದಲ ತ್ರೈಮಾಸಿಕದಲ್ಲಿ ಇಸ್ರೋ ತನ್ನ ಮಾನವ ಸಹಿತ ಗಗನಯಾನ ನೌಕೆಯ ಮೊದಲ ಉಡ್ಡಯನಕ್ಕೆ ಉದ್ದೇಶಿಸಿದೆ. ಇದು ಯಶಸ್ವಿಯಾದರೆ 2ನೇ ತ್ರೈಮಾಸಿಕದಲ್ಲಿ 2ನೇ ಸುತ್ತಿನ ಮಾನವ ರಹಿತ ಗಗನಯಾನದ ಪ್ರಯೋಗ ನಡೆಸಲಿದೆ. ಒಂದು ವೇಳೆ ಎರಡೂ ಉಡ್ಡಯನಗಳು ಯಶಸ್ವಿಯಾದರೆ ವರ್ಷಾಂತ್ಯಕ್ಕೆ ಅಥವಾ 2026ರಕ್ಕೆ ಮಾನವ ಸಹಿತ ಗಗನಯಾನ ನಡೆಸಲಾಗುವುದು. ಈ ಸಂಬಂಧ ಈಗಾಗಲೇ ನಾಲ್ವರು ಗಗನಯಾತ್ರಿಗಳನ್ನು ಇಸ್ರೋ ಸಜ್ಜುಗೊಳಿಸಿದೆ.

ಮೊದಲ ಹೈಡ್ರೋಜನ್‌ ರೈಲುಗಳ ಸೇವೆ ಆರಂಭ: ಭಾರತೀಯ ರೈಲ್ವೆ ತನ್ನ ಮೊದಲ ಹೈಡ್ರೋಜನ್‌ ರೈಲು ಸೇವೆಯನ್ನು 2025ರಲ್ಲಿ ಆರಂಭಿಸಲು ಉದ್ದೇಶಿಸಿದೆ. ಮೊದಲ ವರ್ಷ ಇಂಥ ಒಟ್ಟು 35 ರೈಲುಗಳನ್ನು ಬಳಕೆಗೆ ಬಿಡುಗಡೆ ಮಾಡಲಿದೆ. ಹಾಲಿ, ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿರುವ ಡೀಸೆಲ್‌ ಚಾಲಿತ ರೈಲುಗಳಿಗೆ ಹೋಲಿಸಿದರೆ, ಹೈಡ್ರೋಜನ್‌ ರೈಲುಗಳು ಅತ್ಯಂತ ಪರಿಸರ ಸ್ನೇಹಿಯಾಗಿವೆ. ಇದರಿಂದ ಯಾವುದೇ ಮಾಲಿನ್ಯ ಹೊರಹೊಮ್ಮುವುದಿಲ್ಲ.

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ನೀತಿ ಜಾರಿ: ವಿವಾಹ, ವಿಚ್ಛೇದನ, ಆಸ್ತಿ ಸೇರಿದಂತೆ ಹಲವು ವಿಷಯಗಳಲ್ಲಿ ಎಲ್ಲಾ ಧರ್ಮಗಳಿಗೂ ಒಂದೇ ಕಾನೂನು ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆಯನ್ನು 2025ರ ಜನವರಿಯಿಂದ ಜಾರಿಗೆ ತರಲು ಉತ್ತರಾಖಂಡದ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಜಾರಿಯಾದರೆ ಇಂಥ ಕಾಯ್ದೆ ಜಾರಿ ಮಾಡಿದ ಮೊದಲ ರಾಜ್ಯವೆಂಬ ಹಿರಿಮೆಗೆ ಅದು ಪಾತ್ರವಾಗಲಿದೆ.

11 ತಿಂಗಳ ಬಳಿಕ ಸುನಿತಾ ಬಾಹ್ಯಾಕಾಶದಿಂದ ಭೂಮಿಗೆ: 2024ರ ಜೂನ್‌ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ, ಅಲ್ಲಿಂದ ಭೂಮಿಗೆ ಮರಳಲು ಬಾಹ್ಯಾಕಾಶ ನೌಕೆ ಇಲ್ಲದೇ ಅಲ್ಲೇ ಸಿಕ್ಕಿಬಿದ್ದಿರುವ ಅಮೆರಿಕದ ಬಾಹ್ಯಾಕಾಶ ಯಾನಿ, ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ 2025ರ ಏಪ್ರಿಲ್‌ ವೇಳೆಗೆ ಭೂಮಿಗೆ ಮರಳುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಅವರ ಆರೋಗ್ಯದ ಮೇಲೆ ಆಗಿರಬಹುದಾದ ಪರಿಣಾಮಗಳ ಕುರಿತು ಈಗಾಗಲೇ ಸಾಕಷ್ಟು ಕಳವಳ ವ್ಯಕ್ತವಾಗಿದೆ.

ಟಿಕ್‌ ಟಾಕ್‌ ಮೇಲೆ ಅಮೆರಿಕ ಬ್ಯಾನ್‌ ಈ ವರ್ಷದಲ್ಲಿ ಜಾರಿ: ಚೀನಾ ಮೂಲದ ಬೈಟ್‌ಡ್ಯಾನ್‌ ಒಡೆತನದ ಟಿಕ್‌ಟಾಕ್‌ ಮೇಲೆ ಅಮೆರಿಕ ಹೇರಿರುವ ನಿಷೇಧ 2025ರ ಜನವರಿಯಲ್ಲಿ ಜಾರಿಯಾಗಲಿದೆ. ಚೀನಾ ಮೂಲದ ಕಂಪನಿಗಳಿಂದ ಅಪಾಯದ ಕಾರಣ ನೀಡಿ ಅಮೆರಿಕ ಈಗಾಗಲೇ ನಿರ್ಧಾರ ಕೈಗೊಂಡಿದೆ. 2025ರ ಜ.9ರೊಳಗೆ ಅಮೆರಿಕದ ಟಿಕ್‌ಟಾಕ್‌ ವ್ಯವಹಾರವನ್ನು ಯಾವುದಾದರೂ ಚೀನಾಯೇತರ ಕಂಪನಿಗೆ ಮಾರಾಟ ಮಾಡಿದರೆ ಈ ನಿಷೇಧ ಹಿಂಪಡೆಯಲಾಗುವುದು ಎಂದು ಅಮೆರಿಕದ ಸರ್ಕಾರ ಹೇಳಿದೆ.

88ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ: 2025ರಲ್ಲಿ ನಡೆಯಬೇಕಿರುವ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ‍ದ ಆತಿಥ್ಯ ಗಡಿನಾಡು ಬಳ್ಳಾರಿಗೆ ಒಲಿದಿದೆ. ಬಳ್ಳಾರಿಗೆ ಇಂಥದ್ದೊಂದು ಅವಕಾಶ ಸಿಕ್ಕಿದ್ದು 68 ವರ್ಷಗಳ ಬಳಿಕ. ಈ ಹಿಂದೆ 1926 ಹಾಗೂ 1938ರಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಸ್ವಾತಂತ್ರ್ಯಾನಂತರ 1958 ರಲ್ಲಿ ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದಿತ್ತು.

ಬೆಂಗಳೂರಲ್ಲಿ ಮೊದಲ ಚಾಲಕ ರಹಿತ ಮೆಟ್ರೋ ಸೇವೆ ಆರಂಭ: ಬೆಂಗಳೂರು ಮೆಟ್ರೋ ಕಾರ್ಪೊರೇಷನ್‌, ತನ್ನ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯನ್ನು 2025ರಲ್ಲಿ ಆರಂಭಿಸಲು ಉದ್ದೇಶಿಸಿದೆ. ಈ ಯೋಜನೆಗೆ ಅಗತ್ಯವಾದ ವಿಶೇಷ ರೈಲುಗಳು ಪೂರ್ಣ ಪ್ರಮಾಣದಲ್ಲಿ 2025 ಮೊದಲ ಭಾಗದಲ್ಲಿ ಚೀನಾದಿಂದ ಬೆಂಗಳೂರಿಗೆ ಆಗಮಿಸಲಿದೆ. ಬಳಿಕ ಅವುಗಳನ್ನು ವಿವಿಧ ಹಂತದ ಪರೀಕ್ಷೆಗೆ ಒಳಪಡಿಸಿ ನಂತರ ಅದನ್ನು ಸಾಮಾನ್ಯ ಸೇವೆಗೆ ಬಳಸಲು ಮೆಟ್ರೋ ಕಾರ್ಪೊರೇಷನ್‌ ಉದ್ದೇಶಿಸಿದೆ.

ಬೆಂಗಳೂರಲ್ಲಿ ಅಮೆರಿಕ ದೂತಾವಾಸ ಆರಂಭ: 2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಅಮೆರಿಕ ದೂತಾವಾಸ ಕಚೇರಿ ಆರಂಭವಾಗಲಿದೆ. ಇದರಿಂದ ವೀಸಾ ಸೇರಿ ಅಮೆರಿಕ ಸಂಬಂಧಿ ಸೇವೆಗಳನ್ನು ಸುಲಭವಾಗಿ ಪಡೆಯಲು ಭಾರತೀಯರಿಗೆ ಅನುಕೂಲವಾಗಲಿದೆ.ಈ ಮುಂಚೆ ಭಾರತೀಯರು ಅಮೆರಿಕ ವೀಸಾಗಾಗಿ ಚೆನ್ನೈ ಹಾಗೂ ಇತರ ನಗರಗಳಿಗೆ ತೆರಳಬೇಕಿತ್ತು.

ವಿಧಾನಸೌಧದ ಬಳಿ ನೂತನ ಭುವನೇಶ್ವರಿ ಪ್ರತಿಮೆ ಸ್ಥಾಪನೆ: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಆವರಣದಲ್ಲಿ ನಾಡದೇವಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿತ್ತು. ಈ ಪ್ರತಿಮೆ ಉದ್ಘಾಟನೆ ಈ ವರ್ಷ ನಡೆಯಲಿದೆ.

ಕರ್ನಾಟಕದಲ್ಲಿ ಪಾಲಿಕೆ, ಪಂಚಾಯತ್‌ ಚುನಾವಣೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರು ನಗರ ಪಾಲಿಕೆ, ಶಿವಮೊಗ್ಗ, ತುಮಕೂರು, ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಬೇಕಿದೆ. ಜೊತೆಗೆ ಕರ್ನಾಟಕ ಜಿಲ್ಲಾ ಪಂಚಾಯತ್‌ ಮತ್ತು ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸುವುದಾಗಿ ಸರ್ಕಾರ ಹೇಳಿದೆ.

ಬೆಂಗಳೂರಲ್ಲಿ ಪ್ರತಿಷ್ಠಿತ ಏರ್‌ಶೋ ಈ ವರ್ಷ ಇದೆ: ಏಷ್ಯಾದಲ್ಲಿ ಅತಿದೊಡ್ಡ ಏರ್‌ ಶೋ ಎಂಬ ಹಿರಿಮೆ ಹೊಂದಿರುವ ಬೆಂಗಳೂರು ಏರ್‌ ಶೋ ವರ್ಷ ನಡೆಯಲಿದೆ. 2 ವರ್ಷಕ್ಕೊಮ್ಮೆ ನಡೆವ ಕಾರ್ಯಕ್ರಮ ಈ ವರ್ಷ ಫೆ.10ರಿಂದ ಫೆ.14ರವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಇದರಲ್ಲಿ ದೇಶ- ವಿದೇಶಗಳ ಕಂಪನಿಗಳು ತಮ್ಮ ಅತ್ಯಾಧುನಿಕ ವಿಮಾನಗಳ ಮೂಲಕ ಅವುಗಳ ಸಾಮರ್ಥ್ಯ ಪ್ರದರ್ಶಿಸಲಿವೆ.

ಟಿಕ್‌ ಟಾಕ್‌ ಮೇಲೆ ಅಮೆರಿಕ ಬ್ಯಾನ್‌ ಈ ವರ್ಷದಲ್ಲಿ ಜಾರಿ: ಚೀನಾ ಮೂಲದ ಬೈಟ್‌ಡ್ಯಾನ್‌ ಒಡೆತನದ ಟಿಕ್‌ಟಾಕ್‌ ಮೇಲೆ ಅಮೆರಿಕ ಹೇರಿರುವ ನಿಷೇಧ 2025ರ ಜನವರಿಯಲ್ಲಿ ಜಾರಿಯಾಗಲಿದೆ. ಚೀನಾ ಮೂಲದ ಕಂಪನಿಗಳಿಂದ ಅಪಾಯದ ಕಾರಣ ನೀಡಿ ಅಮೆರಿಕ ಈಗಾಗಲೇ ನಿರ್ಧಾರ ಕೈಗೊಂಡಿದೆ. 2025ರ ಜ.9ರೊಳಗೆ ಅಮೆರಿಕದ ಟಿಕ್‌ಟಾಕ್‌ ವ್ಯವಹಾರವನ್ನು ಯಾವುದಾದರೂ ಚೀನಾಯೇತರ ಕಂಪನಿಗೆ ಮಾರಾಟ ಮಾಡಿದರೆ ಈ ನಿಷೇಧ ಹಿಂಪಡೆಯಲಾಗುವುದು ಎಂದು ಅಮೆರಿಕದ ಸರ್ಕಾರ ಹೇಳಿದೆ.

ಅಮೆರಿಕ ಅಧ್ಯಕ್ಷರಾಗಿ ಜ.20ಕ್ಕೆ ಟ್ರಂಪ್‌ ಅಧಿಕಾರ ಸ್ವೀಕಾರ: ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ 2025ರ ಜ.20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನು ಸೋಲಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ, ನೂತನ ವಲಸೆ ನೀತಿ, ಉದ್ಯೋಗ ನೀತಿ ಮತ್ತು ಅಮೆರಿಕ ಮೊದಲು ಎಂಬ ಹಲವು ಯೋಜನೆಗಳನ್ನು ಟ್ರಂಪ್‌ ಜಾರಿಗೊಳಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ. ಜೆ.ಡಿ.ವ್ಯಾನ್ಸ್‌ ಅಮೆರಿಕದ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಾರ್ವೆಯಲ್ಲಿ ಪೆಟ್ರೋಲ್‌, ಡೀಸೆಲ್ ವಾಹನ ನಿಷೇಧ: ಮೊದಲ ದೇಶ: ಯುರೋಪಿಯನ್‌ ದೇಶವಾದ ನಾರ್ವೆ 2025ರಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ವಾಹನಗಳ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಉದ್ದೇಶಿಸಿದೆ. ಗಡುವಿನೊಳಗೆ ಯೋಜನೆ ಜಾರಿಗೊಂಡರೆ ಇಂಥ ನಿಷೇಧ ಹೇರಿದ ವಿಶ್ವದ ಮೊದಲ ದೇಶವಾಗಿ ಅದು ಹೊರಹೊಮ್ಮಲಿದೆ. ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಅದು ಈ ನಿರ್ಧಾರ ಕೈಗೊಂಡಿದೆ. ಪೆಟ್ರೋಲ್‌, ಡೀಸೆಲ್‌ ಬದಲಾಗಿ ಪೂರ್ಣ ಪ್ರಮಾಣದ ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ನಾರ್ವೆ ಉದ್ದೇಶಿಸಿದೆ.

ಸಿಡ್ನಿ-ಲಂಡನ್‌- ನ್ಯೂಯಾರ್ಕ್‌ ನಡುವೆ ವಿಶ್ವದ ಸುದೀರ್ಘ ವಿಮಾನ ಸೇವೆ: ಆಸ್ಟ್ರೇಲಿಯಾದ ಸಿಡ್ನಿ, ಬ್ರಿಟನ್‌ ರಾಜಧಾನಿ ಲಂಡನ್‌ ಮತ್ತು ಅಮೆರಿಕದ ನ್ಯೂಯಾರ್ಕ್‌ ನಡುವೆ ನೇರ ವಿಮಾನ ಸಂಚಾರಕ್ಕೆ ಕ್ವಾಂಟಸ್‌ ಏರ್‌ಲೈನ್ಸ್‌ ಉದ್ದೇಶಿಸಿದೆ. 19-22 ಗಂಟೆಗಳ ಈ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರು ಎರಡು ಸೂರ್ಯೋದಯ ನೋಡುವ ಅವಕಾಶ ಹೊಂದಿರಲಿದ್ದಾರೆ. ಈ ಮೂಲಕ ಇದು ವಿಶ್ವದ ಅತಿ ಸುದೀರ್ಘ ವಿಮಾನಯಾನ ಸೇವೆಯಾಗಿ ಹೊರಹೊಮ್ಮುವ ನಿರೀಕ್ಷೆ ಇಟ್ಟುಕೊಂಡಿದೆ.

Latest Videos
Follow Us:
Download App:
  • android
  • ios