ಬೆಂಗಳೂರು[ಜು.30]: ಮಾಜಿ ಸಿಎಂ ಎಸ್. ಎಂ ಕೃಷ್ಣ ಅಳಿಯ ಹಾಗೂ ಉದ್ಯಮಿ ವಿ. ಜಿ. ಸಿದ್ಧಾರ್ಥ ನಿಗೂಢ ನಾಪತ್ತೆ ಪ್ರಕರಣ ಬೆನ್ನಲ್ಲೇ ಹಲವಾರು ಊಹಾಪೋಹಗಳು ಸದ್ದು ಮಾಡಲಾರಂಭಿಸಿವೆ. ಅವರು ಬರೆದಿದ್ದಾರೆನ್ನದ ಕೊನೆಯ ಪತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಅನುಮಾನ ಹುಟ್ಟುವಂತೆ ಮಾಡಿದೆ. ಈ ನಡುವೆ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್ ಮಾಡಿರುವ ಟ್ವೀಟ್‌ನಿಂದ ಸಿದ್ಧಾರ್ಥ ನಾಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.

"

ಹೌದು ಸಿದ್ಧಾರ್ಥ ನಾಪತ್ತೆ ಬೆನ್ನಲ್ಲೇ ಅವರು ಬರೆದಿದ್ದರೆನ್ನಲಾದ ಪತ್ರ ಬಹಳಷ್ಟು ವೈರಲ್ ಆಗಿತ್ತು. ಹೀಗಾಗಿ ಸಾಲದ ಸುಳಿಗೆ ಸಿಕ್ಕ ಅವರು ಒತ್ತಡ್ಕಕೀಡಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೀಗ ಸಿದ್ಧಾರ್ಥ ಹಾಗೂ ಅವರ ಕುಟುಂಬದೊಂದಿಗೆ ಆತ್ಮೀಯರಾಗಿದ್ದ ಡಿಕೆಶಿ ಟ್ವೀಟ್ ಮಾಡುತ್ತಾ 'ಜುಲೈ 27ರಂದು ವಿ. ಜಿ. ಸಿದ್ಧಾರ್ಥ ಬರೆದಿರುವ ಪತ್ರ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಇದಾದ ಒಂದು ದಿನದ ಬಳಿಕ ಜುಲೈ 28ರಂದು ಸಿದ್ಧಾರ್ಥ ನನಗೆ ಕರೆ ಮಾಡಿ ಭೇಟಿ ಮಾಡಬಹುದೇ ಎಂದು ಕೇಳಿದ್ದರು. ಹೀಗಿರುವಾಗ ಇಂತಹ ಧೈರ್ಯವಂತ ವ್ಯಕ್ತಿ ಹೀಗೆ ಮಾಡಲು ಸಾಧ್ಯವೇ ಎಂದು ನನ್ನಿಂದ ನಂಬಲಾಗುತ್ತಿಲ್ಲ' ಎಂದಿದ್ದಾರೆ.

ಎಸ್. ಎಂ ಕೃಷ್ಣ ಅಳಿಯ, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆ? ಪತ್ರದಲ್ಲಿ ಮಹತ್ವದ ಮಾಹಿತಿ!

ಇದರ ಬೆನ್ನಲ್ಲೇ ಮತ್ತೊಂದು ಟ್ವಿಟ್ ಮಾಡಿರುವ ಡಿಕೆಶಿ 'ಈ ಪ್ರಕರಣ ಅನುಮಾನಾಸ್ಪದವಾಗಿದೆ. ಹೀಗಾಗಿ ತನಿಖೆ ನಡೆಸಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಸಿದ್ಧಾರ್ಥ ಹಾಗೂ ಅವರ ಕುಟುಂಬವನ್ನು ನಾನು ದಶಕಕ್ಕೂ ಹೆಚ್ಚು ಸಮಯದಿಂದ ಬಲ್ಲೆ' ಎಂದಿದ್ದಾರೆ.