ಗಾಂಧಿನಗರ(ಡಿ.22): ಸೋಹ್ರಾಬುದ್ದೀನ್ ಎನ್‌ಕೌಂಟರ್ ಆಗದೇ ಇದ್ದಿದ್ದರೆ, ಪಾಕಿಸ್ತಾನ ಅಂದಿನ ಗುಜರಾತ್ ಮುಖ್ಯಮಂತ್ರಿ, ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಿರುತ್ತಿತ್ತು ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಿಜಿ ವಂಜಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಗುಜರಾತ್ ಪೊಲೀಸರು ಸೋಹ್ರಾಬುದ್ದೀನ್ ಎನ್‌ಕೌಂಟರ್ ಮಾಡದೇ ಇದ್ದಲ್ಲಿ, ಗುಜರಾತ್‌ನ್ನು ಮತ್ತೊಂದು ಕಾಶ್ಮೀರವನ್ನಾಗಿ ಮಾಡುವುದಕ್ಕೆ ಪಾಕಿಸ್ತಾನ ಸಂಚು ರೂಪಿಸಿತ್ತು ಎಂದು ವಂಜಾರ ಹೇಳಿದ್ದಾರೆ.

ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಹವಣಿಸುತ್ತಿದ್ದ ಪಾಕ್, ಕೋಮುಗಲಭೆಗಳ ತಾಣವನ್ನಾಗಿ ಗುಜರಾತ್‌ನ್ನು ಪರಿವರ್ತಿಸುವ ಯೋಜನೆ ರೂಪಿಸಿತ್ತು ಎಂದು ವಂಜಾರ ತಿಳಿಸಿದ್ದಾರೆ.

ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಆಗ ವಿವಿಧ ರಾಜ್ಯಗಳಲ್ಲಿದ್ದ ಬಿಜೆಪಿ ಸರ್ಕಾರಗಳನ್ನು ತುಳಿಯಲು ಪೊಲೀಸ್ ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಿತು ಎಂದೂ ವಂಜಾರ ಗಂಭೀರ ಆರೋಪ ಮಾಡಿದ್ದಾರೆ. 

ಸೋಹ್ರಾಬುದ್ದಿನ್ ತುಳಸಿರಾಮ್ ಪ್ರಜಾಪತಿ ಪ್ರಕರಣದಲ್ಲಿ ಸಿಬಿಐ ಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಡಿಜಿ ವಂಜಾರ ಈ ಹೇಳಿಕೆ ನೀಡಿದ್ದಾರೆ. ಸೋಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಡಿಜಿ ವಂಜಾರ ಅವರನ್ನೂ ಸಹ ವಿಚಾರಣೆಗೊಳಪಡಿಸಲಾಗಿತ್ತು. 

ಅಮಿತ್ ಶಾ ಬಂಧನಕ್ಕೆ ಕಾರಣವಾಗಿದ್ದ ಸೊಹ್ರಾಬುದ್ದೀನ್ ಕೇಸ್: ಆರೋಪಿಗಳು ಖುಲಾಸೆ!