ತಿರುವನಂತಪುರ (ಡಿ.03): ಹಲವು ದಶಕಗಳಿಂದ ಭಕ್ತರನ್ನು ನಿಭಾಯಿಸುವುದೇ ದೊಡ್ಡ ಸಮಸ್ಯೆಯಾಗಿದ್ದ ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲಕ್ಕೀಗ ಭಕ್ತರ ಕೊರತೆ!

ನಿಜ. ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದ ಬಳಿಕ, ಕೇರಳದಲ್ಲಿ ನಡೆದ ಹಿಂಸಾಚಾರ ಪ್ರಕರಣಗಳು, ದೇಗುಲಕ್ಕೆ ಆಗಮಿಸುವ ಭಕ್ತರಲ್ಲಿ ಭಾರೀ ಭಯ ಮೂಡಿಸಿದೆ. ಅದರಲ್ಲೂ ನೆರೆಯ ರಾಜ್ಯಗಳಿಂದ ಆಗಮಿಸುತ್ತಿದ್ದ ಭಕ್ತರಿಗೆ ದೇಗುಲದ ಸುತ್ತಮುತ್ತಲ ಪ್ರದೇಶದಲ್ಲಿನ ಹಿಂಸಾಚಾರದ ಪ್ರಕರಣಗಳು ಆತಂಕ ಮೂಡಿಸಿವೆ. ಹೀಗಾಗಿ ಈ ಬಾರಿ ವಾರ್ಷಿಕ ಯಾತ್ರೆ ವೇಳೆ ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.

ಪ್ರತಿ ವರ್ಷ ದೇಗುಲಕ್ಕೆ ಅಂದಾಜು 50-60 ಲಕ್ಷ ಜನ ಆಗಮಿಸುತ್ತಾರೆ. ಆದರೆ ಈ ಬಾರಿ ವಿವಾದದ ಕಾರಣ ಇದರ ಅರ್ಧದಷ್ಟುಜನ ಬರುವುದು ಅನುಮಾನವಾಗಿದೆ. ಹೀಗಾಗಿ ಚಿಂತೆಗೆ ಒಳಗಾಗಿರುವ ತಿರುವಾಂಕೂರು ದೇಗುಲ ಮಂಡಳಿ, ದೇಗುಲಕ್ಕೆ ಭಕ್ತರನ್ನು ಆಕರ್ಷಿಸಲು ಜಾಹೀರಾತು ನೀಡುವ ಬಗ್ಗೆ ಚಿಂತನೆ ನಡೆಸಿದೆ.

ಖ್ಯಾತ ನಟರು ಹಾಗೂ ಇತರೆ ಸೆಲೆಬ್ರೆಟಿಗಳ ಮೂಲಕ, ಶಬರಿಮಲೆಯಲ್ಲಿ ಎಲ್ಲವೂ ಸುಸೂತ್ರವಾಗಿದೆ. ಆತಂಕವಿಲ್ಲದೇ ಇಲ್ಲಿಗೆ ಬನ್ನಿ ಎಂದು ಜಾಹೀರಾತುಗಳ ಮೂಲಕ ಪ್ರಚಾರ ನಡೆಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಡಿ.3ರಂದು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.