ವಾಷಿಂಗ್ಟನ್(ನ.7): ಡೋನಾಲ್ಡ್ ಟ್ರಂಪ್ ಆಡಳಿತಕ್ಕೆ ಸಿಕ್ಕಿರುವ ಜನಪ್ರಿಯತೆಯನ್ನು ಅಳೆಯುವ ಚುನಾವಣೆಯೆಂದೇ ಬಿಂಬಿಸಲಾಗಿದ್ದ ಅಮೆರಿಕ ಮಧ್ಯಂತರ ಚುನಾವಣೆ -2018 ರ ಫಲಿತಾಂಶ ಪ್ರಕಟಗೊಂಡಿದೆ. 

ಜನಪ್ರತಿನಿಧಿಗಳ ಸಭೆಗೆ ನಡೆದ ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರೆಟ್ ಪಕ್ಷ ಪ್ರಾಬಲ್ಯ ಮೆರೆದಿದ್ದರೆ, ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಸೆನೆಟ್ ನಲ್ಲಿ ಪ್ರಾಬಲ್ಯ ಮೆರೆದಿದೆ. 

ಜನಪ್ರತಿನಿಧಿಗಳ ಸಭೆಯಲ್ಲಿ ಬಹುಮತ ಅಗತ್ಯವಿರುವ 23 ಸ್ಥಾನಗಳನ್ನು ಡೆಮಾಕ್ರೆಟ್ ಪಕ್ಷ ಗಳಿಸಿದ್ದು, ರಿಪಬ್ಲಿಕನ್ ಪಕ್ಷ ವರ್ಜೀನಿಯಾ, ಫ್ಲೋರಿಡಾ, ಪೆನ್ಸಿಲ್ವೇನಿಯಾ ಮತ್ತು ಕೊಲೊರೆಡೊಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ 100 ಸದಸ್ಯರಿರುವ ಸೆನೆಟ್ ನಲ್ಲಿ ಹೆಚ್ಚಿನ ಸ್ಥಾನಗಳನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

ಸೆನೆಟ್ ನಲ್ಲಿ ರಿಪಬ್ಲಿಕನ್ ಪಕ್ಷ ಯಶಸ್ಸು ಗಳಿಸಿದ್ದು, ಡೊನಾಲ್ಡ್ ಟ್ರಂಪ್ ಜನಾದೇಶವನ್ನು ಪ್ರಚಂಡ ಗೆಲುವು ಎಂದು ಹೇಳಿದ್ದು ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ. 

ಅಮೆರಿಕ ಮಧ್ಯಂತರ ಚುನಾವಣೆಯ ಫಲಿತಾಂಶ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಸಿಕ್ಕಿರುವ ಯಶಸ್ಸು ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಹುಕಾಬೀ ಸ್ಯಾಂಡರ್ಸ್ ಹೇಳಿದ್ದಾರೆ.