ನವದೆಹಲಿ [ನ.02]: ನಾಲ್ಕು ದಿನಗಳಿಂದ ಹೊಗೆ ಮಿಶ್ರಿತ ದಟ್ಟ ಮಂಜು ಸಮಸ್ಯೆಯಿಂದ ಬಳಲುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಮಾಲಿನ್ಯ ಹಠಾತ್ ಇನ್ನಷ್ಟು ಅಪಾಯಕಾರಿ ಮಟ್ಟವನ್ನು ತಲುಪಿದೆ. ವಾಯುಗುಣಮಟ್ಟ ಸೂಚ್ಯಂಕ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 500 ರ ಗಡಿ ದಾಟಿದೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿರುವ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರವು ದೆಹಲಿಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿ

ನ.೫ರವರೆಗೆ ನಿರ್ಮಾಣ ಚಟುವಟಿಕೆಗಳಿಗೆ ನಿಷೇಧ ಹೇರಿದೆ. ಈ ಮಧ್ಯೆ ದೆಹಲಿ ಸರ್ಕಾರ ನ.5 ರವರೆಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಗುರುವಾರ ತಡರಾತ್ರಿ (ಶುಕ್ರವಾರ ನಸುಕಿನ ಜಾವ) 12.30 ರ ವೇಳೆಗೆ ಮಾಲಿನ್ಯ ಗುಣಮಟ್ಟ ಸೂಚ್ಯಂಕ 582ಕ್ಕೆ ಏರಿಕೆಯಾಗಿದೆ. ಮಾಲಿನ್ಯ ಪ್ರಮಾಣ 500 ರ ಗಡಿ ದಾಟಿದರೆ ಅದನ್ನು ಅತಿ ಗಂಭೀರ ಅಥವಾ ತುರ್ತು ಪರಿಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಮಾಲಿನ್ಯ ಹೆಚ್ಚಾದ ಹಿನ್ನೆಲೆಯಲ್ಲಿ ದೆಹಲಿ ಜನರು ಮುಂಜಾನೆ ವಾಯುವಿಹಾರ ನಿಲ್ಲಿಸಿದ್ದಾರೆ.  ಎಲ್ಲೆಂದರಲ್ಲಿ ಮಾಸ್ಕ್ ಹಾಕಿಕೊಂಡು ಓಡಾಡುವವರು ಕಂಡುಬರುತ್ತಿದ್ದಾರೆ. ಗಂಟಲು, ಶ್ವಾಸಕೋಶ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.

ಕರ್ತಾರ್‌ಪುರ್: ಭಾರತೀಯ ಪ್ರವಾಸಿಗರಿಗೆ ಶುಲ್ಕ ವಿನಾಯ್ತಿ ಘೋಷಿಸಿದ ಇಮ್ರಾನ್!...

ಪಂಜಾಬ್, ಹರ್ಯಾ ಕೊಡುಗೆ: ದೆಹಲಿಯ ಈ ಸಮಸ್ಯೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಪಂಜಾಬ್ ಹಾಗೂ ಹರ್ಯಾಣ ರಾಜ್ಯಗಳ ರೈತರು ಭತ್ತ ಕಟಾವು ಮಾಡಿದ ಬಳಿಕ ಉಳಿಯುವ ಕೂಳೆಗೆ ಬೆಂಕಿ ಹಚ್ಚುತ್ತಿರುವುದೇ ಪ್ರಮುಖ ಕಾರಣವಾಗಿದೆ. ಬೆಂಕಿಯಿಂದ ಏಳುವ ಹೊಗೆ ದೆಹಲಿಯನ್ನು ಆವರಿಸುತ್ತಿದೆ. ಇದರ ಜತೆಗೆ ಮಂಜು ಸೇರಿಕೊಂಡು ಜನರನ್ನು ಹೈರಾಣಾಗಿಸಿದೆ. ಉತ್ತರ ಭಾರತದಲ್ಲಿ ಜೋರಾಗಿ ಗಾಳಿ ಬೀಸಿದರೆ ದೆಹಲಿಗೆ ಎದುರಾಗಿರುವ ಕಂಟಕ ನಿವಾರಣೆಯಾಗುತ್ತದೆ. ಹೀಗಾಗಿ ಗಾಳಿಗಾಗಿ ಜನರು ಪ್ರಾರ್ಥಿಸುವಂತಾಗಿದೆ.

ಮಾಲಿನ್ಯ ಮುಂದಿನ 48 ತಾಸು ವಾತಾವರಣ ಇದೇ ರೀತಿ ಇದ್ದರೆ, ಸಮ- ಬೆಸ ಸಂಖ್ಯೆಯ ವಾಹನ ಓಡಾಟ ಪದ್ಧತಿ, ಲಾರಿಗಳ ಪ್ರವೇಶಕ್ಕೆ ನಿಷೇಧದಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಸುಪ್ರೀಂಕೋರ್ಟ್‌ನಿಂದ ನೇಮಕಗೊಂಡಿರುವ ಪರಿಸರ ಮಾಲಿನ್ಯ (ತಡೆ ಹಾಗೂ ನಿಯಂತ್ರಣ) ಪ್ರಾಧಿಕಾರ (ಇಪಿಸಿಎ) ಈಗಾಗಲೇ ಚಳಿಗಾಲದಲ್ಲಿ ಪಟಾಕಿ ಸಿಡಿತವನ್ನು ನಿಷೇಧಿಸಿದೆ. ಸ್ಟೋನ್ ಕ್ರಷರ್ ಗಳು, ನಿರ್ಮಾಣ ಚಟುವಟಿಕೆಗಳನ್ನು ನ. 5 ರವರೆಗೂ ಬಂದ್ ಮಾಡಲು ಸೂಚಿಸಿದೆ.

ಮಕ್ಕಳು ವಯಸ್ಕರಿಗಿಂತ ವೇಗವಾಗಿ ಉಸಿರಾಡುವ ಕಾರಣಕ್ಕೆ ದೆಹಲಿ ಸರ್ಕಾರ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ೫೦ ಲಕ್ಷ ಎನ್‌೯೫ ಮಾಸ್ಕ್‌ಗಳನ್ನು ಹಂಚಿಕೆ ಮಾಡಿದೆ. ಮಂಗಳವಾರದವರೆಗೆ ರಜೆ ಘೋಷಣೆ ಮಾಡಿದೆ. ಇದೇ ವೇಳೆ, ಭತ್ತ ಕೂಳೆ ದಹಿಸುವುದನ್ನು ನಿಲ್ಲಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಂಕಲ್ ಹಾಗೂ ಹರ‌್ಯಾಣದ ಮನೋಹರ ಲಾಲ್ ಖಟ್ಟರ್ ಅಂಕಲ್‌ಗೆ ಪತ್ರ ಬರೆಯುವಂತೆ ಮಕ್ಕಳಿಗೆ ಮುಖ್ಯಮಂತ್ರಿ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಕೂಳೆ ದಹಿಸುವುದನ್ನು ತಡೆಯಲು ತಕ್ಷಣವೇ ಕ್ರಮ ತೆಗೆದುಕೊಳ್ಳುವಂತೆ ಇಪಿಸಿಎ ಕೂಡ ಸೂಚಿಸಿದೆ.

ಮಾಲಿನ್ಯ ಪ್ರಮಾಣ ಶೂನ್ಯದಿಂದ50  ಇದ್ದರೆ ಉತ್ತಮ, 51 - 100 ಇದ್ದರೆ ತೃಪ್ತಿದಾಯಕ, 101 - 200 ಇದ್ದರೆ ಸಾಧಾರಣ, 201 -300 ಇದ್ದರೆ ಕಳಪೆ, 301 - 400 ಇದ್ದರೆ ಅತಿ ಕಳಪೆ, 401- 500 ಇದ್ದರೆ ಗಂಭೀರ ಹಾಗೂ 500 ಮೇಲ್ಪಟ್ಟು ಇದ್ದರೆ ಹೆಚ್ಚು ಗಂಭೀರ ತುರ್ತು ಪರಿಸ್ಥಿತಿ ಎಂದು ವರ್ಗೀಕರಿಸಲಾಗುತ್ತದೆ.