ನವದೆಹಲಿ (ಜು.09): ರೈಲ್ವೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುತ್ತಿದೆ ಎಂಬ ವಿಪಕ್ಷಗಳ ಆರೋಪಗಳ ಬೆನ್ನಲ್ಲೇ, ದೆಹಲಿ- ಲಖನೌ ನಡುವೆ ಸಂಚರಿಸುವ ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನ ನಿರ್ವಹಣೆಯನ್ನು ಖಾಸಗಿಗೆ ವಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಖಾಸಗಿಯವರಿಂದ ನಿರ್ವಹಣೆ ಆಗಲಿರುವ ದೇಶದ ಮೊದಲ ರೈಲು ಎನಿಸಿಕೊಳ್ಳಲಿದೆ.

ಅಲ್ಲದೇ 500 ಕಿ.ಮೀ. ದೂರದ ಒಳಗಿನ ಇನ್ನೊಂದು ರೈಲ್ವೆ ಮಾರ್ಗವನ್ನು ಕೂಡ ಖಾಸಗಿಯವರಿಗೆ ವಹಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಈ ಎರಡು ರೈಲುಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ 100 ದಿನಗಳ ಕಾರ್ಯಸೂಚಿಯನ್ನು ಸರ್ಕಾರ ಹಾಕಿಕೊಂಡಿದೆ.

ದೆಹಲಿ- ಲಖನೌ ತೇಜಸ್‌ ಎಕ್ಸ್‌ಪ್ರೆಸ್‌ ರೈಲನ್ನು 2016ರಲ್ಲಿ ಪ್ರಕಟಿಸಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಹೊಸ ವೇಳಾಪಟ್ಟಿಪ್ರಕಟಿಸಲಾಗಿದೆ. ಸದ್ಯ ಆನಂದ್‌ನಗರ್‌ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿರುವ ಈ ರೈಲಿನ ಕಾರ್ಯನಿರ್ವಹಣೆಗೆ ಖಾಸಗಿಯವರಿಂದ ಶೀಘ್ರದಲ್ಲೇ ಬಿಡ್ಡಿಂಗ್‌ ಆಹ್ವಾನಿಸಲಾಗುತ್ತದೆ. 

ಆದರೆ ಅದಕ್ಕೂ ಮುನ್ನ ರೈಲಿನ ಸುಪರ್ದಿಯನ್ನು ಇಂಡಿಯನ್‌ ರೈಲ್ವೆ ಕ್ಯಾಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಿದೆ. ಜು.10ರ ಒಳಗಾಗಿ ಹಣಕಾಸು ಪ್ರಸ್ತಾವನೆ ಸಲ್ಲಿಸುವಂತೆ ಐಆರ್‌ಸಿಟಿಸಿಗೆ ಸೂಚಿಸಲಾಗಿದೆ. ದೆಹಲಿ- ಲಖನೌ ಮಾರ್ಗದಲ್ಲಿ ಸದ್ಯ 53 ರೈಲುಗಳು ಸಂಚರಿಸುತ್ತಿವೆ. ಆದರೆ, ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿಲ್ಲ. ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್‌ ಬಹುಬೇಡಿಕೆಯ ರೈಲಾಗಿದೆ.