Asianet Suvarna News Asianet Suvarna News

ಶಿಶುಕಾಮಿಗಳಿಗೆ ಗಲ್ಲು ಶಿಕ್ಷೆ: ಕೇಂದ್ರದ ನಿರ್ಧಾರಕ್ಕೆ ಆರ್‌ಸಿ ಸ್ವಾಗತ

ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಪೋಕ್ಸೋ ಕಾಯ್ದೆ ತಿದ್ದುಪಡಿ| ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಿಸಲು ಹಲವು ಕ್ರಮ

Death for brutal child rape MP Rajeev chandrasekhar welcomes the decision of Central
Author
New Delhi, First Published Dec 29, 2018, 9:43 AM IST

ನವದೆಹಲಿ[ಡಿ.29]: ದೇಶಾದ್ಯಂತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಮಕ್ಕಳ ಮೇಲೆ ಭೀಕರ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಮರಣದಂಡನೆ ವಿಧಿಸುವ ಸಲುವಾಗಿ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ. ತಿದ್ದುಪಡಿ ಕಾಯ್ದೆಯಡಿ ಹೆಣ್ಣು, ಗಂಡು ಎಂಬ ಭೇದಬಾವವಿಲ್ಲದೆ 18 ವರ್ಷದೊಳಗಿನ ಎಲ್ಲಾ ವಯಸ್ಸಿನವರನ್ನು ಮಕ್ಕಳೆಂದೇ ಪರಿಗಣಿಸಲಾಗುವುದು. ಇದಕ್ಕಾಗಿ ಪೋಕ್ಸಾ ಕಾಯ್ದೆಯ ಸೆಕ್ಷನ್‌ 4,5 ಮತ್ತು 6ನ್ನು ತಿದ್ದುಪಡಿ ಮಾಡಲಾಗುವುದು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ಇದರ ಜೊತೆಗೆ, ನೈಸರ್ಗಿಕ ವಿಕೋಪ ಅಥವಾ ದುರಂತಗಳಿಗೆ ತುತ್ತಾದ ಮಕ್ಕಳು ಶೋಷಣೆಗೆ ಒಳಗಾಗದಂತೆ ನೋಡಿಕೊಳ್ಳುವ ಹಾಗೂ ಶೋಷಣೆ ನಡೆಸುವ ಉದ್ದೇಶದಿಂದ ಮಕ್ಕಳನ್ನು ಬೇಗ ವಯಸ್ಕರನ್ನಾಗಿಸಲು ಹಾರ್ಮೋನ್‌ಗಳನ್ನು ನೀಡುವುದಕ್ಕೆ ಕಡಿವಾಣ ಹಾಕುವ ಅಂಶಗಳೂ ತಿದ್ದುಪಡಿಯಲ್ಲಿವೆ. ಇದಕ್ಕಾಗಿ ಸೆಕ್ಷನ್‌ 9ರಲ್ಲಿ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

‘ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಲ್ಪಡುತ್ತದೆ. ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು ಕಠಿಣ ಶಿಕ್ಷೆಗೆ ಅರ್ಹರಾಗಿರುತ್ತಾರೆ. ಈ ನಿಟ್ಟಿನಲ್ಲಿ ಮೋದಿ ಸರ್ಕಾರ ಕೈಗೊಂಡ ಕ್ರಮಗಳು ಸ್ವಾಗತಾರ್ಹ. ಇನ್ನು ಮುಂದಿನ ದಿನಗಳಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳ ತ್ವರಿತ ವಿಚಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು'

-ರಾಜೀವ್‌ ಚಂದ್ರಶೇಖರ್‌, ರಾಜ್ಯಸಭಾ ಸಂಸದ

ಇನ್ನು ಮಕ್ಕಳ ಅಶ್ಲೀಲ ಚಿತ್ರಗಳನ್ನು ಅಳಿಸದೇ ಹೋದರೆ ಹಾಗೂ ಆ ಕುರಿತು ಗೊತ್ತಿದ್ದೂ ಮಾಹಿತಿ ನೀಡದೇ ಹೋದರೆ ಭಾರಿ ದಂಡ ವಿಧಿಸುವ ಅಂಶವೂ ತಿದ್ದುಪಡಿಯಲ್ಲಿದೆ. ಸೆಕ್ಷನ್‌ 14 ಮತ್ತು 15ನ್ನು ತಿದ್ದುಪಡಿ ತರುವ ಮೂಲಕ ಅಪರಾಧಿಗಳಿಗೆ ಜೈಲು ಮತ್ತು ದಂಡ ಎರಡನ್ನೂ ವಿಧಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಪ್ರಸಾದ್‌ ಹೇಳಿದರು.

ಮಕ್ಕಳನ್ನು ಲೈಂಗಿಕ ಶೋಷಣೆಗಳಿಂದ ರಕ್ಷಿಸುವ ಸಲುವಾಗಿ 2012ರಲ್ಲಿ ಪೋಕ್ಸೋ ಕಾಯ್ದೆಯನ್ನು ರೂಪಿಸಲಾಗಿತ್ತು. ಅಂದಿನಿಂದ ಹಲವು ಬಾರಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

Follow Us:
Download App:
  • android
  • ios