ನವದೆಹಲಿ (ಡಿ. 01): ಮಾಜಿ ಕ್ರಿಕೆಟಿಗ ಮಹಮ್ಮದ್‌ ಅಜರುದ್ದೀನ್‌ ಅವರನ್ನು ತೆಲಂಗಾಣ ರಾಜ್ಯ ಕಾಂಗ್ರೆಸ್‌ ಘಟಕದ ಕಾರಾರ‍ಯಧ್ಯಕ್ಷರಾಗಿ ನೇಮಿಸಲಾಗಿದೆ. ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ನಡೆದಿರುವ ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಪಕ್ಷ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ, ರಾಜ್ಯದಲ್ಲಿ ಶೇ.12ರಷ್ಟುಜನಸಂಖ್ಯಾ ಪಾಲು ಹೊಂದಿರುವ ಮುಸ್ಲಿಮರನ್ನು ಓಲೈಕೆ ಮಾಡಲು ಹಲವು ಯೋಜನೆಗಳನ್ನು ಘೋಷಿಸಲಾಗಿತ್ತು. ಅದರ ಬೆನ್ನಲ್ಲೇ ಇದೀಗ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಜರುದ್ದೀನ್‌ ಅವರಿಗೆ ಪಕ್ಷದ ಕಾರಾರ‍ಯಧ್ಯಕ್ಷ ಹುದ್ದೆಯನ್ನು ಕಲ್ಪಿಸಲಾಗಿದೆ.

ಅಜರ್‌ ಜೊತೆಗೆ ರಾಜ್ಯ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷರನ್ನಾಗಿ ಬಿ.ಎಂ.ವಿನೋದ್‌ ಕುಮಾರ್‌ ಮತ್ತು ಜಾಫರ್‌ ಜಾವೇದ್‌ ಅವರನ್ನು ನೇಮಿಸಿ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಆದೇಶ ಹೊರಡಿಸಿದ್ದಾರೆ. ಅಜರ್‌ 2009ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ 2014ರಲ್ಲಿ ರಾಜಸ್ಥಾನದ ಟೋಂಕ್‌-ಸವಾಯ್‌ ಮಾಧೋಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಿಕಂದರಾಬಾದ್‌ ಕ್ಷೇತ್ರದಿಂದ ಸ್ಪರ್ಧಿಸುವ ಕಣಕ್ಕಿಳಿಯುವ ಆಲೋಚನೆಯಲ್ಲಿ ಇದ್ದಾರೆ.