ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇದೀಗ ಡಿಸೆಂಬರ್ ತಿಂಗಳನ್ನು ಗಡುವಾಗಿ ನೀಡಲಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಇದೀಗ ಕೇಂದ್ರ ಸರ್ಕಾರಕ್ಕೆ ಸಾಧು ಸಂತರು ಗಡುವು ನೀಡಿದ್ದಾರೆ
ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 1992ರ ಮಾದರಿ ಹೋರಾಟಕ್ಕೆ ಸಿದ್ಧ ಎಂಬ ಆರ್ಎಸ್ಎಸ್ನ ಎಚ್ಚರಿಕೆ ಬೆನ್ನಲ್ಲೇ, ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲು ಇದೀಗ ಕೇಂದ್ರ ಸರ್ಕಾರಕ್ಕೆ ಸಾಧು ಸಂತರು ಗಡುವು ನೀಡಿದ್ದಾರೆ. ಮುಂಬರುವ ಡಿ.6ರೊಳಗೆ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸದೇ ಹೋದಲ್ಲಿ ತಾವೇ ಈ ಕಾರ್ಯ ಕೈಗೊಳ್ಳುವುದಾಗಿ ಇಲ್ಲಿ ಸಭೆ ಸೇರಿದ್ದ 3500ಕ್ಕೂ ಸಾಧು- ಸಂತರು ಎಚ್ಚರಿಕೆ ನೀಡಿದ್ದಾರೆ.
ಅದರಲ್ಲೂ ವಿಎಚ್ಪಿಯ ಫೈರ್ಬ್ರ್ಯಾಂಡ್ ಖ್ಯಾತಿಯ ಸಾಧ್ವಿ ಪ್ರಾಚಿ ಅವರಂತೂ, 1992ರಲ್ಲಿ ಅಯೋಧ್ಯೆಯಲ್ಲಿ ಯಾರನ್ನೂ ಕೇಳದೆಯೇ ನಾವು ಏನು ಮಾಡಿದೆವೋ, ಈಗಲೇ ಅದೇ ರೀತಿ ಯಾರನ್ನೂ ಕೇಳದೆಯೇ ಮಂದಿರ ನಿರ್ಮಿಸುತ್ತೇವೆ. ಡಿ.6ಕ್ಕೆ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಖಚಿತ ಎಂದು ಅಬ್ಬರಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಅಂತಿಮ ನಿರ್ಧಾರಕ್ಕೆ ಬರಲೆಂದೇ ದೆಹಲಿಯ ತಲಕ್ಟೋರಾ ಕ್ರೀಡಾಂಗಣದಲ್ಲಿ ‘ಮಂದಿರ ಸಮ್ಮೇಳನ’ದ ಹೆಸರಿನಲ್ಲಿ ಶುಕ್ರವಾರದಿಂದ 2 ದಿನಗಳ ಸಮ್ಮೇಳನ ಆಯೋಜಿಸಲಾಗಿತ್ತು. ವಿಶ್ವಹಿಂದೂ ಪರಿಷತ್, ವಿವಿಧ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರು, ಸಾಧು, ಸಂತರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನ ಶ್ರೀ ಶ್ರೀ ರವಿಶಂಕರ್ ಗುರೂಜಿ, ಯೋಗಗುರು ಬಾಬಾ ರಾಮ್ದೇವ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಸಮ್ಮೇಳನದ ಅಂತಿಮ ದಿನವಾದ ಶನಿವಾರ ಒಂದು ಸಾಲಿನ ನಿರ್ಣಯವನ್ನು ಅಂಗೀಕರಿಸಲಾಯಿತು. ಅದರಲ್ಲಿ ‘ಅಯೋಧ್ಯೆ ವಿಷಯ ಕುರಿತು ದೈನಂದಿನ ವಿಚಾರಣೆ ನಡೆಸುವುದಾಗಿ ಕಳೆ ಅಕ್ಟೋಬರ್ನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ತನ್ನ ಇತ್ತೀಚಿನ ಅದೇಶದಲ್ಲಿ ಅದು ಪ್ರಕರಣವನ್ನು ಮತ್ತೆ ಮುಂದೂಡಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಿಸಬೇಕು’ ಎಂಬ ನಿರ್ಧಾರಕ್ಕೆ ಬರಲಾಯಿತು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಎಚ್ಪಿ ಅಧ್ಯಕ್ಷ ಅಲೋಕ್ ಕುಮಾರ್, ಆದಷ್ಟುಬೇಗ ರಾಮಮಂದಿರ ನಿರ್ಮಾಣಕ್ಕೆ ಸೂಕ್ತ ಕಾನೂನು ರೂಪಿಸಿ ಎಂದು ನಾವು ಸರ್ಕಾರವನ್ನು ಆಗ್ರಹಿಸುತ್ತೇವೆ. ಒಂದು ವೇಳೆ ಸರ್ಕಾರ, ಸಾಧುಗಳ ಮನವಿಗೆ ಓಗೊಡದೇ ಹೋದಲ್ಲಿ ನಾವು ನಮ್ಮ ದಾರಿ ಕಂಡುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಇನ್ನೊಂದೆಡೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಖಚಿತ. ಇದನ್ನು ಯಾರಿಂದಲೂ ತಡೆಯಲಾಗದು. ಈ ನಿಟ್ಟಿನಲ್ಲಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಡಿ.6ಕ್ಕೆ ಶಿಲಾನ್ಯಾಸಕ್ಕೆ ದಿನ ನಿಗದಿ ಮಾಡಬೇಕು. ಇಲ್ಲದೇ ಹೋದಲ್ಲಿ 1992ರಲ್ಲಿ ಯಾರ ಮಾತನ್ನು ಕೇಳದೆಯೇ ನಾವು ಹೇಗೆ ಕಟ್ಟಡವನ್ನು ಧ್ವಂಸಗೊಳಿಸಿದ್ದೆವೋ ಅದೇ ರೀತಿ, ರಾಮಮಂದಿರ ನಿರ್ಮಿಸುತ್ತೇವೆ. ನಮಗೆ ಯಾರ ನೆರವೂ ಬೇಕಿಲ್ಲ. ಡಿ.6ಕ್ಕೆ ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.
ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ಮಾಧವ್ ಅವರು ಕೂಡಾ ಸುಗ್ರೀವಾಜ್ಞೆಯ ಪರ ವಾದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಯೋಧ್ಯೆ ವಿಷಯದಲ್ಲಿ ಶೀಘ್ರ ಸುಪ್ರೀಂಕೋರ್ಟ್ನಿಂದ ತೀರ್ಪು ಹೊರಬೀಳುವ ನಿರೀಕ್ಷೆ ಇತ್ತು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಸಹಜವಾಗಿಯೇ ಜನರಿಂದ ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆಯ ಬೇಡಿಕೆ ಕೇಳಿಬಂದಿದೆ. ಶುಕ್ರವಾರ ಆರ್ಎಸ್ಎಸ್ ವ್ಯಕ್ತಪಡಿಸಿದ್ದು ಕೂಡಾ ಇದೇ ಜನರ ಅಭಿಪ್ರಾಯ. ಇನ್ನು ಸರ್ಕಾರ ಮುಂದೆ ಸುಗ್ರೀವಾಜ್ಞೆಯ ಅವಕಾಶ ಇದ್ದೇ ಇದೆ ಎಂದು ಹೇಳಿದ್ದಾರೆ.
ಇದೇ ವೇಳೆ ಯೋಗಗುರು ಬಾಬಾ ರಾಮ್ದೇವ್, ಆರ್ಟ್ ಆಫ್ ಲಿವಿಂಗ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಸೇರಿದಂತೆ ಸಭೆಯಲ್ಲಿ ಭಾಗಿಯಾಗಿದ್ದ ಗಣ್ಯರು ಕೂಡಾ, ಸುಗ್ರಿವಾಜ್ಞೆ ಮೂಲಕ ಮಂದಿರ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹ ಮಾಡಿದರು.
ಕೇಂದ್ರ ಸರ್ಕಾರಕ್ಕೆ ಅಯೋಧ್ಯೆ ಬಿಸಿಅಯೋಧ್ಯೆ ಬಗ್ಗೆ ಸುಪ್ರೀಂಕೋರ್ಟ್ ಶೀಘ್ರ ತೀರ್ಪು ಪ್ರಕಟಿಸದೇ ಹೋದಲ್ಲಿ, ಸರ್ಕಾರ ಸೂಕ್ತ ಕಾನೂನಿನ ಮೂಲಕ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು. ಪ್ರಜಾಪ್ರಭುತ್ವದಲ್ಲಿ ಸಂಸತ್ತೇ ಅತ್ಯುನ್ನತ ಸಂಸ್ಥೆ. ಬಹುಜನರ ಅಭಿಪ್ರಾಯದ ಮೇರೆಗೆ ಮಂದಿರ ನಿರ್ಮಾಣಕ್ಕಾಗಿ ಸರ್ಕಾರ ಹೊಸ ಕಾನೂನು ರೂಪಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ಅಲ್ಲದೆ ಮತ್ತಿನ್ನೇನು ನಿರ್ಮಿಸಲು ಸಾಧ್ಯ?
- ಬಾಬಾ ರಾಮ್ದೇವ್, ಯೋಗ ಗುರು
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಖಚಿತ. ಇದಕ್ಕಾಗಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು. ಶಿಲಾನ್ಯಾಸ ನೆರವೇರಿಸಲು ಡಿ.6 ರ ದಿನ ನಿಗದಿ ಮಾಡಬೇಕು. ಇಲ್ಲದೇ ಹೋದಲ್ಲಿ ಯಾರನ್ನು ಕೇಳದೆಯೇ 1992ರಲ್ಲಿ ಅಯೋಧ್ಯೆಯಲ್ಲಿ ಕಟ್ಟಡವನ್ನು ಹೇಗೆ ಧ್ವಂಸಗೊಳಿಸಿದ್ದೆವೋ ಅದೇ ರೀತಿ ಈಗಲೂ ಯಾರನ್ನೂ ಕೇಳದೆಯೇ ಮಂದಿರ ನಿರ್ಮಿಸುತ್ತೇವೆ. ಡಿ.6ಕ್ಕೆ ಶಿಲಾನ್ಯಾಸ ನೆರವೇರಿಸುತ್ತೇವೆ.
- ಸಾಧ್ವಿ ಪ್ರಾಚಿ, ವಿಎಚ್ಪಿ ನಾಯಕಿ
ಕೋರ್ಟ್ ತ್ವರಿತ ತೀರ್ಪು ನೀಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ನ್ಯಾಯಾಂಗ ವ್ಯವಸ್ಥೆಯು 1992ಕ್ಕೂ ಮುನ್ನ ಯಾವ ರೀತಿಯ ಕಾಲಹರಣ ಮಾಡಿತ್ತೋ, ಅದನ್ನೇ ಪುನರಾವರ್ತಿಸುತ್ತಿದೆ. ಇದು ದುರದೃಷ್ಟಕರ. ಹೀಗಾಗಿಯೇ ರಾಮಭಕ್ತರು ಆಕ್ರೋಶಗೊಂಡಿದ್ದಾರೆ. ಜನರ ಮನದಾಳವನ್ನೇ ಆರ್ಎಸ್ಎಸ್ ವ್ಯಕ್ತಪಡಿಸಿದೆ. ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆಯ ಅವಕಾಶ ಸರ್ಕಾರಕ್ಕೆ ಈಗಲೂ ಇದ್ದೇ ಇದೆ.- ರಾಮ್ ಮಾಧವ್, ಬಿಜೆಪಿ ಪ್ರಧಾನ ಕಾರ್ಯದರ್ಶಿ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 4, 2018, 7:30 AM IST