ನವದೆಹಲಿ (ಜ. 03): ಲಿವ್ ಇನ್ ಸಂಬಂಧ ಹೊಂದಿರುವ ವ್ಯಕ್ತಿ ಒಂದು ವೇಳೆ ತನ್ನ ನಿಯಂತ್ರಣಕ್ಕೂ ಮೀರಿ ನಡೆದ ಸನ್ನಿವೇಶಗಳಿಂದಾಗಿ ತನ್ನ ಪ್ರೇಯಸಿಯನ್ನು ವಿವಾಹ ಆಗಲು ಸಾಧ್ಯವಾಗದೇ ಇದ್ದರೆ, ಅವರಿಬ್ಬರ ಮಧ್ಯೆ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಲಿವ್ ಇನ್ ಸಂಬಂಧ ಹೊಂದಿದ್ದ ಮಹಾರಾಷ್ಟ್ರ ಮೂಲದ ನರ್ಸ್‌ವೊಬ್ಬಳು ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್, ‘ನೀವಿಬ್ಬರೂ ಬಹಳ ಸಮಯದಿಂದ ಲಿವ್ ಇನ್ ಸಂಬಂಧ ಹೊಂದಿದ್ದೀರಿ’ ಎಂದು ಹೇಳಿ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿದೆ. ಅತ್ಯಾಚಾರ ಮತ್ತು ಸಮ್ಮತಿಯ ಸೆಕ್ಸ್ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. ಇಂತಹ ಪ್ರಕರಣಗಳಲ್ಲಿ ಕೋರ್ಟ್‌ಗಳು ದೂರುದಾರನ ಉದ್ದೇಶ ವನ್ನು ಸೂಕ್ಷ್ಮವಾಗಿ ಗಮನಿಸಬೇಕು.

ಲಿವ್ ಇನ್ ಸಂಬಂಧದ ವೇಳೆ ಆತ ಕಾಮದಾಸೆ ತೀರಿಸಿಕೊಳ್ಳಲು ಆರೋಪಿತ ವ್ಯಕ್ತಿ ಸುಳ್ಳು ಭರವಸೆಗಳನ್ನು ನೀಡಿದ್ದನೇ ಅಥವಾ ದುರುದ್ದೇಶದ ಸಂಬಂಧ ಅದಾಗಿತ್ತೇ? ಎನ್ನುವುದು ಮುಖ್ಯವಾಗುತ್ತದೆ ಎಂದು ಕೋರ್ಟ್ ಹೇಳಿದೆ. ಇದೇ ವೇಳೆ, ಆರೋಪಿತ ವ್ಯಕ್ತಿ ಮಹಿಳೆಯನ್ನು ತಪ್ಪುದಾರಿಗೆ ಎಳೆಯುವ ಉದ್ದೇಶದಿಂದ ಭರವಸೆಗಳನ್ನು ನೀಡದೇ ಲೈಂಗಿಕ ಕ್ರಿಯೆಯಲ್ಲಿ ಸಮ್ಮತಿಯಿಂದ ತಡಗಿಕೊಂಡಿದ್ದರೂ ಅದು ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.