ಲಖನೌ (ಜ.12):  ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಶತಾಯಗತಾಯ ಹೆಡೆಮುರಿ ಕಟ್ಟುವ ಹೋರಾಟದ ಭಾಗವಾಗಿ ಗುರುತಿಸಿಕೊಂಡಿರುವ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಶನಿವಾರ ಮೈತ್ರಿ ವಿಚಾರವನ್ನು ಪ್ರಕಟಿಸಲಿದೆ. ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಹಾಗೂ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. ಆದರೆ ಮೈತ್ರಿಕೂಟದಿಂದ ಕಾಂಗ್ರೆಸ್‌ ಹೊರಗುಳಿಯಲಿದೆ.

ಎಸ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ ಮತ್ತು ಬಿಎಸ್‌ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‌ಸಿ ಮಿಶ್ರಾ ಶುಕ್ರವಾರ ಈ ಕುರಿತು ಮಾಹಿತಿ ನೀಡಿದರು. ಆದರೆ, ಕಾಂಗ್ರೆಸ್‌ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ ಬಳಿಕ ನಡೆಸಲಾಗುತ್ತಿರುವ ಮೊದಲ ಸುದ್ದಿಗೋಷ್ಠಿ ಇದಾಗಿದೆ.

ತಲಾ 37 ಕ್ಷೇತ್ರಗಳು!:

ಒಟ್ಟು 80 ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಪ್ರಬಲ ಪಕ್ಷಗಳೆನಿಸಿಕೊಂಡಿರುವ ಎಸ್‌ಪಿ ಮತ್ತು ಬಿಎಸ್‌ಪಿ ತಲಾ 37 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಒಡಂಬಡಿಕೆ ಮಾಡಿಕೊಂಡಿವೆ ಎಂದು ಮೂಲಗಳು ಹೇಳುತ್ತಿವೆ. ಅಂದರೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಪ್ರಭಾವ ಇರುವ ರಾಯ್‌ ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸದಿರಲು ನಿರ್ಧರಿಸಿವೆ.

ಸಣ್ಣ ಪಕ್ಷಗಳಾದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಮತ್ತು ನಿಶಾದ್‌ ಪಕ್ಷಗಳು ಈ ಮೈತ್ರಿ ಬೆಂಬಲಿಸಿವೆ ಎನ್ನಲಾಗಿದೆ. 2014ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು 80ರಲ್ಲಿ 73 ಕ್ಷೇತ್ರಗಳನ್ನು ಗೆದ್ದು ಜಯಭೇರಿ ಭಾರಿಸಿತ್ತು.

‘ಮಹಾಘಟಬಂಧನ್‌’ ಗಮನದಲ್ಲಿರಿಸಿಕೊಂಡು ಕಾಂಗ್ರೆಸ್‌ ಹೆಜ್ಜೆ ಇಡಲಿದೆ. ಮೈತ್ರಿ ವಿಚಾರದಲ್ಲಿ ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ಬದ್ಧವಾಗಿರುತ್ತೇವೆ. ಯಾವುದೇ ರೀತಿಯ ಸ್ಪರ್ಧೆಗೂ ಕಾಂಗ್ರೆಸ್‌ ರೆಡಿ.

- ರಾಜೀವ್‌ ಬಕ್ಷಿ, ಕಾಂಗ್ರೆಸ್‌ ಮಾಧ್ಯಮ ವಕ್ತಾರ