ಲಖನೌ (ಜ. 14): ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳು ಉತ್ತರ ಪ್ರದೇಶದಲ್ಲಿ ಕೈಕೊಟ್ಟಿದ್ದರಿಂದ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್ ಈಗ ಪುಟಿದೆದ್ದಿದ್ದು, ರಾಜ್ಯದ ಎಲ್ಲ 80 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ.

ಆದರೆ ಸಮಾನ ಮನಸ್ಕ ಪಕ್ಷಗಳ ಜತೆ ಮೈತ್ರಿಯ ಬಾಗಿಲನ್ನು ತೆರೆದಿಟ್ಟಿರುವ ಕಾಂಗ್ರೆಸ್ ಪಕ್ಷ, ಬಿಜೆಪಿಯೇತರ ಪಕ್ಷಗಳು ಮೈತ್ರಿಗೆ ಸಿದ್ಧವಾಗಿದ್ದಲ್ಲಿ ಅಂಥ ಪಕ್ಷಗಳಿಗೆ ಕೂಟದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿವೆ.

ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ಗುಲಾಂ ನಬಿ ಆಜಾದ್, ‘ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. 2009 ರ ಲೋಕಸಭೆ ಚುನಾವಣೆಯಲ್ಲಿ ಪಡೆದ 21 ಸ್ಥಾನಕ್ಕಿಂತ ಪಡೆದಿದ್ದಕ್ಕಿಂತ ದುಪ್ಪಟ್ಟು ಕ್ಷೇತ್ರಗಳನ್ನು ಪಕ್ಷ ಜಯಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‘ನಾವು ಬಿಎಸ್‌ಪಿ-ಎಸ್‌ಪಿ ಮಹಾಮೈತ್ರಿಕೂಟದ ಪಾಲುದಾರರಾಗಲು ಸಿದ್ಧವಾಗಿದ್ದೆವು. ಆದರೆ ಅವರು ಬೇಡ ಎಂದಲ್ಲಿ ನಾವೇನು ಮಾಡಿಕೊಳ್ಳಲು ಸಾಧ್ಯ’ ಎಂದು ಬೇಸರಿಸಿದರು.