ನವದೆಹಲಿ: ಮಧ್ಯಪ್ರದೇಶದಲ್ಲಿ 15 ವರ್ಷ ಹಾಗೂ ರಾಜಸ್ಥಾನದಲ್ಲಿ 5 ವರ್ಷದ ಬಳಿಕ ಮತ್ತೆ ಅಧಿಕಾರ ಬಂದಿರುವ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಭಾರೀ ಪೈಪೋಟಿ ಕಂಡುಬಂದಿದ್ದು, ಅಂತಿಮವಾಗಿ ಹಿರಿಯ ನಾಯಕರಿಗೆ ಮಣೆ ಹಾಕುವ ನಿರ್ಧಾರಕ್ಕೆ ಪಕ್ಷ ಬಂದಿದೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಕಮಲ್‌ನಾಥ್‌ ಮತ್ತು ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಸಿಎಂ ಹುದ್ದೆ ಏರುವುದು ಬಹುತೇಕ ಖಚಿತವಾಗಿದೆ.

"

ಮಧ್ಯಪ್ರದೇಶ ಸಿಎಂ ಕುರಿತು ರಾಜಸ್ಥಾನ ಮತ್ತು ಛತ್ತೀಸ್‌ಗಢ ಸಿಎಂಗಳ ಕುರಿತು ಶುಕ್ರವಾರ ನಿರ್ಧಾರ ಪ್ರಕಟವಾಗಲಿದೆ.

ಈ ನಡುವೆ ರಾಜಸ್ಥಾನದಲ್ಲಿ ಸಚಿನ್‌ ಪೈಲಟ್‌ ಬೆಂಬಲಿಗರು ಮತ್ತು ಛತ್ತೀಸ್‌ಗಢದಲ್ಲಿ ಸಿಎಂ ಹುದ್ದೆ ಆಕಾಂಕ್ಷಿಗಳ ಪರ ಕಾರ್ಯಕರ್ತರು, ತಮ್ಮ ನಾಯಕನಿಗೆ ಹುದ್ದೆ ನೀಡುವಂತೆ ಆಗ್ರಹಿಸಿ ರಸ್ತೆ ತಡೆ ನಡೆಸುವ ಮೂಲಕ ಹೈಕಮಾಂಡ್‌ಗೆ ಬಿಸಿ ಮುಟ್ಟಿಸುವ ಯತ್ನ ಮಾಡಿದ್ದಾರೆ.

ಬಿರುಸಿನ ಮಾತುಕತೆ: 3 ರಾಜ್ಯಗಳ ಸಿಎಂ ಆಯ್ಕೆ ಸಂಬಂಧ ಗುರುವಾರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನಿವಾಸದಲ್ಲಿ ಭಾರೀ ಚಟುವಟಿಕೆ ಕಂಡುಬಂತು. ಮುಂಜಾನೆಯಿಂದಲೇ 3 ರಾಜ್ಯಗಳಲ್ಲಿನ ಪಕ್ಷದ ವೀಕ್ಷಕರು ಮೂಲಕ ಅಭಿಪ್ರಾಯ ಸಂಗ್ರಹ ಕಾರ್ಯವನ್ನು ರಾಹುಲ್‌ ಮಾಡಿದರು. ಬಳಿಕ ಮಧ್ಯಪ್ರದೇಶ ಸಿಎಂ ಹುದ್ದೆ ಆಕಾಂಕ್ಷಿಗಳಾದ ಕಮಲ್‌ನಾಥ್‌, ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ರಾಜಸ್ಥಾನದಲ್ಲಿ ಹುದ್ದೆ ಆಕಾಂಕ್ಷಿಗಳಾದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಬಳಿಕ ಸಂಜೆ ವೇಳೆ ರಾಹುಲ್‌ ನಿವಾಸಕ್ಕೆ ಆಗಮಿಸಿದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ರ ಸೋದರಿ ಪ್ರಿಯಾಂಕಾ ವಾದ್ರಾ ಕೂಡಾ, ಸಿಎಂ ಆಯ್ಕೆ ಕುರಿತ ಸಮಾಲೋಚನೆಯಲ್ಲಿ ಭಾಗಿಯಾಗಿದರು.

ಕಮಲ್‌ಗೆ ಮಣೆ: ಮಧ್ಯಪ್ರದೇಶದಲ್ಲಿ ಬಿಎಸ್‌ಪಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌, ಕಮಲ್‌ನಾಥ್‌ಗೆ ಸಿಎಂ ಹುದ್ದೆ ನೀಡುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಸರಳ ಬಹುಮತ ಇರುವ ಕಾರಣ ಅನುಭವಿ ನಾಯಕನ ಅಗತ್ಯ, ವಿಧಾನಸಭೆಯಲ್ಲಿ ಬಹುತೇಕ ಸದಸ್ಯರ ಬೆಂಬಲ, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸಬೇಕಾದ ಅಗತ್ಯವನ್ನು ಬಹುವಾಗಿ ಮನಗಂಡ ಪಕ್ಷದ ಹೈಕಮಾಂಡ್‌, ಕಮಲ್‌ನಾಥ್‌ಗೆ ಸಿಎಂ ಹುದ್ದೆ ನೀಡುವ ನಿರ್ಧಾರಕ್ಕೆ ಬಂದಿತು ಎನ್ನಲಾಗಿದೆ. ರಾಜ್ಯದಲ್ಲಿ ಯುವ ನಾಯಕ ಸಿಂಧಿಯಾ ಅವರಿಗೆ ಸಿಎಂ ಹುದ್ದೆ ನೀಡುವ ಆಶಯ ರಾಹುಲ್‌ಗೆ ಇತ್ತಾದರೂ, ಸೋನಿಯಾ ಸೂಚನೆ ಅನ್ವಯ ಕಮಲ್‌ಗೆ ಸಿಎಂ ಹುದ್ದೆ ನೀಡಲು ರಾಹುಲ್‌ ಒಪ್ಪಿದರು. ಬಳಿಕ ಉಪಮುಖ್ಯಮಂತ್ರಿ ಹುದ್ದೆಯ ಆಹ್ವಾನವನ್ನು ಸಿಂಧಿಯಾ ಮುಂದಿಟ್ಟರು ಎನ್ನಲಾಗಿದೆ.

ಗೆಹ್ಲೋಟ್‌ಗೆ ಹೊಣೆ: ಮಧ್ಯಪ್ರದೇಶದಂತೆ ರಾಜಸ್ಥಾನದಲ್ಲೂ ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್‌ ಸಿಎಂ ಹುದ್ದೆ ಏರುವುದು ಬಹುತೇಕ ಖಚಿತವಾಗಿದೆ. 2013ರಲ್ಲಿ ರಾಜ್ಯದ ಪಕ್ಷಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಗೆಹ್ಲೋಟ್‌, ರಾಜ್ಯದಲ್ಲಿ ರಾಜೇ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ರಚಿಸುವಲ್ಲಿ ಯಶಸ್ವಿಯಾಗಿದ್ದರು. ಜೊತೆಗೆ ಇತ್ತೀಚಿನ ದಿನಗಳಲ್ಲಿ ಸೋನಿಯಾ ಮತ್ತು ರಾಹುಲ್‌ಗೆ ಆಪ್ತರಾಗಿಯೂ ಹೊರಹೊಮ್ಮಿದ್ದರು. ಅಲ್ಲದೇ ಈ ಬಾರಿ ರಾಜ್ಯದಲ್ಲಿ ಪಕ್ಷಕ್ಕೆ ಸರಳ ಬಹುಮತ ಸಿಕ್ಕಿದ್ದು, ಅತ್ಯಂತ ಸಮತೋಲಿತ ರೀತಿಯಲ್ಲಿ 5 ವರ್ಷ ಸರ್ಕಾರ ನಡೆಸಬೇಕಿದೆ. ಹೀಗಾಗಿ ಯುವ ನಾಯಕ ಸಚಿನ್‌ ಪೈಲಟ್‌ರ ತೀವ್ರ ಹೋರಾಟದ ಹೊರತಾಗಿಯೂ ಅವರು ಸಿಎಂ ಹುದ್ದೆ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.