ನವದೆಹಲಿ (ಡಿ. 28): ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ರಾಜಕೀಯ ಕಾರ್ಯದರ್ಶಿ ಸಂಜಯ್‌ ಬಾರು ವಿರಚಿತ ಕೃತಿ ಆಧಾರಿತ ‘ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಿತ್ರದ ಟ್ರೇಲರ್‌ ಬಿಡುಗಡೆಯಾದ ಬೆನ್ನಲ್ಲೇ, ಈ ಚಿತ್ರ ಬಿಡುಗಡೆಗೂ ಮುನ್ನ ತಮ್ಮ ಮುಂದೆ ಪ್ರದರ್ಶನ ಮಾಡಬೇಕು ಎಂದು ಚಿತ್ರ ನಿರ್ಮಾಪಕರಿಗೆ ಮಹಾರಾಷ್ಟ್ರ ಯುವ ಕಾಂಗ್ರೆಸ್‌ ಪತ್ರ ಮುಖೇನ ಆಗ್ರಹಿಸಿದೆ.

ಅಲ್ಲದೆ, ಅವಾಸ್ತವವಾದ ದೃಶ್ಯಾವಳಿಗಳನ್ನು ಚಿತ್ರಗಳನ್ನು ತೆಗೆದು ಹಾಕಬೇಕು. ಇಲ್ಲದಿದ್ದರೆ, ದೇಶದ ಯಾವುದೇ ಮೂಲೆಯಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್‌ ಯುವ ಘಟಕ ಎಚ್ಚರಿಕೆ ನೀಡಿದೆ. ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌ ಚಿತ್ರವು 2019ರ ಜನವರಿ 11ರಂದು ದೇಶದ ಎಲ್ಲೆಡೆ ಬಿಡುಗಡೆಯಾಗಲಿದೆ.