Asianet Suvarna News Asianet Suvarna News

ಸಿಖ್‌ ಹತ್ಯೆ: ‘ಕೈ’ವಾಡ ಇಲ್ಲ ಎಂದ ರಾಹುಲ್‌ ಪೇಚು!

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. 1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಂತರ ನಡೆದಿದ್ದ ಸಿಖ್ಖರ ನರಮೇಧ ತುಂಬಾ ನೋವಿನ ದುರಂತ. ಅದರಲ್ಲಿ ಕಾಂಗ್ರೆಸ್‌ ಭಾಗಿಯಾಗಿಲ್ಲ ಎಂದಿದ್ದಾರೆ.

Congress Not Involved In Anti Sikh Riots
Author
Bengaluru, First Published Aug 26, 2018, 8:05 AM IST

ಲಂಡನ್‌/ನವದೆಹಲಿ: ಬ್ರಿಟನ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತೊಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ. 1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಂತರ ನಡೆದಿದ್ದ ಸಿಖ್ಖರ ನರಮೇಧ ತುಂಬಾ ನೋವಿನ ದುರಂತ. ಅದರಲ್ಲಿ ಕಾಂಗ್ರೆಸ್‌ ಭಾಗಿಯಾಗಿಲ್ಲ. ಆ ನರಮೇಧದಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು ಎಂಬುದಕ್ಕೆ ನನ್ನ ಪರಿಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಬಿಜೆಪಿ ಹಾಗೂ ಶಿರೋಮಣಿ ಅಕಾಲಿದಳ ಪಕ್ಷಗಳು ರಾಹುಲ್‌ ವಿರುದ್ಧ ಮುಗಿಬಿದ್ದಿವೆ. ಕಾಂಗ್ರೆಸ್ಸಿಗರು ಸಿಖ್ಖರ ನರಮೇಧದಲ್ಲಿ ಭಾಗಿಯಾಗಿಲ್ಲ ಎಂದಾದ ಮೇಲೆ ಪ್ರಧಾನಿಯಾಗಿದ್ದಾಗ ಮನಮೋಹನಸಿಂಗ್‌ ಅವರೇಕೆ ಕ್ಷಮೆ ಕೇಳಬೇಕಿತ್ತು ಎಂಬಿತ್ಯಾದಿ ಪ್ರಶ್ನೆಗಳನ್ನು ಮಾಡಿವೆ. ಇದರ ಬೆನ್ನಲ್ಲೇ, ಕಾಂಗ್ರೆಸ್‌ ಪಕ್ಷ ರಕ್ಷಣೆಗೆ ಧಾವಿಸಿದ್ದು, ಇಂದಿರಾ ಅವರು ಹತ್ಯೆಯಾದಾಗ ರಾಹುಲ್‌ 13 ಅಥವಾ 14 ವರ್ಷದ ಹುಡುಗ. ಈ ವಿಷಯದಲ್ಲಿ ಅವರನ್ನು ಹೊಣೆಗಾರರನ್ನಾಗಿಸಬೇಡಿ ಎಂದು ಹೇಳಿದೆ.

ರಾಹುಲ್‌ ಹೇಳಿದ್ದೇನು?:

ಎರಡು ದಿನಗಳ ಬ್ರಿಟನ್‌ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಬ್ರಿಟನ್‌ನ ಸಂಸದರು ಹಾಗೂ ಸ್ಥಳೀಯ ನಾಯಕರನ್ನುದ್ದೇಶಿಸಿ ಮಾತನಾಡಿದರು. ಸುಮಾರು 3000 ಮಂದಿಯ ಸಾವಿಗೆ ಕಾರಣವಾದ 1984ರ ಸಿಖ್ಖರ ನರಮೇಧ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಆ ದುರಂತ ಒಂದು ನೋವಿನ ಸಂಗತಿ. ಯಾರ ವಿರುದ್ಧವೇ ಆಗಲಿ ಹಿಂಸೆ ಮಾಡುವುದು ತಪ್ಪು. ಸದ್ಯ ಭಾರತದಲ್ಲಿ ಆ ಪ್ರಕರಣದ ಕುರಿತು ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಆ ಕಾಲದಲ್ಲಿ ನಡೆದಿದ್ದು ತಪ್ಪು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಅದಕ್ಕೆ ನನ್ನ ಶೇ.100 ಬೆಂಬಲವಿದೆ. ಈ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಆ ನರಮೇಧದಲ್ಲಿ ಕಾಂಗ್ರೆಸ್‌ ಭಾಗಿಯಾಗಿದೆ ಎಂಬ ಅಭಿಪ್ರಾಯವನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಟೈಟ್ಲರ್‌ರನ್ನು ಏಕೆ ತೆಗೆದಿರಿ?:

ರಾಹುಲ್‌ ಹೇಳಿಕೆ ಹೊರಬೀಳುತ್ತಿದ್ದಂತೆ ಅಕಾಲಿ ದಳದ ನಾಯಕ, ಪಂಜಾಬ್‌ನ ಮಾಜಿ ಡಿಸಿಎಂ ಸುಖಬೀರ್‌ ಸಿಂಗ್‌ ಬಾದಲ್‌ ಅವರು ವಾಗ್ದಾಳಿ ನಡೆಸಿದ್ದಾರೆ. ಸಿಖ್‌ ನರಮೇಧದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್‌ ನಾಯಕ ಜಗದೀಶ್‌ ಟೈಟ್ಲರ್‌ ಅವರನ್ನೇಕೆ ಸಚಿವ ಸ್ಥಾನದಿಂದ ಕೈಬಿಡಲಾಯಿತು? ನೂರಕ್ಕೂ ಅಧಿಕ ಸಿಖ್ಖರನ್ನು ಕೊಂದಿದ್ದೇನೆ ಎಂದು ಟೈಟ್ಲರ್‌ ಅವರೇ ಹೇಳಿಕೊಂಡಿದ್ದಾರೆ ಎಂದು ಹರಿಹಾಯ್ದಿದ್ಧಾರೆ.

‘ದೊಡ್ಡ ಮರವೊಂದು ಬಿದ್ದರೆ ಭೂಮಿ ನಡುಗುತ್ತದೆ’ ಎಂದು ಸಿಖ್‌ ನರಮೇಧದ ಕುರಿತು ಸ್ವತಃ ರಾಜೀವ್‌ ಗಾಂಧಿ ಪ್ರತಿಕ್ರಿಯಿಸಿದ್ದರು ಎಂದು ಅಕಾಲಿದಳದ ನಾಯಕ ಬಿಕ್ರಮ್‌ ಸಿಂಗ್‌ ಮಜಿತಿಯಾ ಅವರು ರಾಹುಲ್‌ಗೆ ನೆನಪಿಸಿದ್ದಾರೆ. ಈ ಮಧ್ಯೆ, ರಾಹುಲ್‌ ಗಾಂಧಿ ಅವರಿಗೆ ನಾಯಕತ್ವ ಗುಣವಿಲ್ಲ. ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರೇ ಸಿಖ್‌ ನರಮೇಧ ಕುರಿತು ಕ್ಷಮೆ ಕೇಳಿದ್ದರು ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಹೇಳಿದ್ದಾರೆ.

ಪಾಪ, ರಾಹುಲ್‌ ಆಗ ಹುಡುಗ:

ರಾಹುಲ್‌ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ರಕ್ಷಣೆಗೆ ಧಾವಿಸಿರುವ ಕಾಂಗ್ರೆಸ್‌ ನಾಯಕ ಚಿದಂಬರಂ, 1984ರಲ್ಲಿ ಕಾಂಗ್ರೆಸ್‌ ಪಕ್ಷವೇ ಅಧಿಕಾರದಲ್ಲಿತ್ತು. ಆಗ ಭಯಾನಕ ಘಟನೆ ನಡೆದುಹೋಯಿತು. ಆ ಬಗ್ಗೆ ಮನಮೋಹನ ಸಿಂಗ್‌ ಸಂಸತ್ತಿನಲ್ಲೇ ಕ್ಷಮೆ ಯಾಚಿಸಿದ್ದಾರೆ. ರಾಹುಲ್‌ ಅವರನ್ನು ಆ ವಿಚಾರದಲ್ಲಿ ಹೊಣೆಗಾರರನ್ನಾಗಿ ಮಾಡಬೇಡಿ. ಘಟನೆ ನಡೆದಾಗ ಅವರು ಹದಿಮೂರೋ ಹದಿನಾಲ್ಕೋ ವರ್ಷದ ಹುಡುಗ. ಅವರು ಯಾರಿಗೂ ಕ್ಲೀನ್‌ಚಿಟ್‌ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

Follow Us:
Download App:
  • android
  • ios