ಜೈಪುರ :  ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆದು ವಿಜಯಿಯಾಗುವುದು ಖಚಿತ ಎಂದು ಹೇಳಿವೆ.  ಈ ನಿಟ್ಟಿನಲ್ಲಿ ಕಾಂಗ್ರೆಸ್ ಮುಖಂಡರು ಸಖತ್ ಬ್ಯುಸಿಯಾಗಿದ್ದಾರೆ. ರಾಜಸ್ಥಾನದಲ್ಲಿ ಸರ್ಕಾರ ರಚನೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 

ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್, ಎಐಸಿಸಿ ಜನರಲ್ ಸೆಕ್ರೆಟರಿ ಅಶೋಕ್ ಗೆಹ್ಲೋಟ್, ರಾಜಸ್ಥಾನ  ಉಸ್ತುವಾರಿ ಅವಿನಾಶ್ ಪಾಂಡೆ ಹೊಸದಿಲ್ಲಿಗೆ ತೆರಳಿದ್ದು ಸರ್ಕಾರ ರಚನೆ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಜೊತೆ ಚರ್ಚೆ ನಡೆಸಿದ್ದಾರೆ.  ಅಲ್ಲದೇ ಅಶೋಕ್ ಗೆಹ್ಲೋಟ್ ಅವರು ಯುಪಿಎ ಮುಖಂಡೆ ಸೋನಿಯಾ ಗಾಂಧಿ ಅವರನ್ನೂ ಕೂಡ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

ಡಿಸೆಂಬರ್ 7 ರಂದು ಚುನಾವಣೆ ಮುಕ್ತಾಯವಾಗಿದ್ದು,  ಡಿಸೆಂಬರ್ 11 ರಂದು  ಫಲಿತಾಂಶ ಪ್ರಕಟವಾಗುತ್ತಿದೆ.  ಅಲ್ಲದೇ ಈಗಾಲೇ ನಡೆದ ಅನೇಕ ಚುನಾವಣೋತ್ತರ ಸಮೀಕ್ಷೆಗಳು ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಿನ ಸೂಚನೆಯನ್ನು ನೀಡಿದ್ದು, ಇದೇ ಭರವಸೆಯಲ್ಲಿರುವ ಪಕ್ಷದಲ್ಲಿ  ಈಗಾಗಲೇ ಕೆಲಸ ಕಾರ್ಯಗಳು ಆರಂಭವಾಗಿವೆ. ಆದರೆ ಕೆಲವೇ ಕೆಲವು ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿವೆ. 

ಸದ್ಯ ದೇಶದ ಪಂಚರಾಜ್ಯಗಳಾದ  ಮಧ್ಯ ಪ್ರದೇಶ, ಮಿಜೋರಾಂ, ಚತ್ತೀಸ್ ಗಢ, ತೆಲಂಗಾಣ, ರಾಜಸ್ಥಾನದಲ್ಲಿ ಚುನಾವಣೆ ಮುಕ್ತಾಯವಾಗಿದೆ. ಡಿಸೆಂಬರ್ 7ಕ್ಕೆ ಚುನಾವಣೆ ಮುಗಿದಿದ್ದು, 11 ರಂದು ಫಲಿತಾಂಶ ಪ್ರಕಟವಾಗುತ್ತಿದೆ.