Asianet Suvarna News Asianet Suvarna News

ಸಿದ್ದರಾಮಯ್ಯಗೆ ಕಾಂಗ್ರೆಸ್ಸಿಗರ ಶಹಬ್ಬಾಸ್‌ ಗಿರಿ

ಸಿದ್ದರಾಮಯ್ಯ ಆಡಳಿತಕ್ಕೆ ಕಾಂಗ್ರೆಸ್ ಮುಖಂಡರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಸುಸೂತ್ರ ಆಡಳಿತ ನಡೆಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Congress Leaders Appreciate Siddaramaiah Administration

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದಲ್ಲಿ ಕಾನೂನು- ಸುವ್ಯವಸ್ಥೆಯನ್ನು ರಾಜ್ಯದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ದೇಶದಲ್ಲಿ ಶಾಂತಿ- ಸುವ್ಯವಸ್ಥೆಯಲ್ಲಿ ಕರ್ನಾಟಕ ಮೇಲ್ಪಂಕ್ತಿಯಲ್ಲಿದೆ. ಇಲ್ಲಿನ ವಾತಾವರಣ, ರೈತರಿಗೆ ಸರ್ಕಾರ ಸ್ಪಂದಿಸಿದ ರೀತಿ ಶ್ಲಾಘನೀಯ. ಇದಕ್ಕಾಗಿ ಕರ್ನಾಟಕಕ್ಕೆ ಸೆಲ್ಯೂಟ್‌ ಹೊಡೆಯಬೇಕು.

- ಹೀಗಂತ ಉತ್ತರಪ್ರದೇಶದ ಕಾಂಗ್ರೆಸ್‌ ಮುಖಂಡ, ರಾಜ್ಯಸಭಾ ಸದಸ್ಯ ರಾಜ್‌ಬಬ್ಬರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಟಿಫಿಕೆಟ್‌ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೋಯ್‌ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಉತ್ತಮ ಆಡಳಿತ ನೀಡಿದ್ದಾರೆ. ಕಾವೇರಿ ವಿಚಾರದಲ್ಲಿಯೂ ಹೋರಾಟ ನಡೆಸುತ್ತಿದ್ದಾರೆ. ಮಹದಾಯಿ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡುತ್ತಿದೆ. ಈ ಎಲ್ಲವನ್ನೂ ನೆನಪಿಟ್ಟುಕೊಂಡು ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಬೇಕು ಎಂದು ಕರೆ ನೀಡಿದರು.

ಯುಪಿ ಅಪರಾಧ ಕೇಂದ್ರ:

ಉತ್ತರ ಪ್ರದೇಶದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅಪರಾಧ ಚಟುವಟಿಕೆ ವರದಿಯಾಗಿದ್ದು ಕಾನೂನು- ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹೀಗಿರುವಾಗ ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳದೆ ಬೇರೆಯವರ ತಟ್ಟೆಯಲ್ಲಿನ ನೊಣ ಹುಡುಕಲು ಬರುವುದು ಬೇಡ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಅವರು ಟಾಂಗ್‌ ನೀಡಿದರು.

ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಉತ್ತರ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಅಪರಾಧ ಪ್ರಕರಣಗಳು ಶೇ.33 ರಷ್ಟುಹೆಚ್ಚಳವಾಗಿದ್ದು, ಕಾನೂನು- ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹೀಗಿದ್ದರೂ ಶಾಂತಿ- ಸುವ್ಯವಸ್ಥೆಗೆ ಮತ್ತೊಂದು ಹೆಸರಿನಂತಿರುವ ಕರ್ನಾಟಕ ರಾಜ್ಯವನ್ನು ಟೀಕಿಸುತ್ತಿದ್ದಾರೆ. ಮೊದಲು ನಿಮ್ಮ ತಟ್ಟೆಯಲ್ಲಿರುವ ಹೆಗ್ಗಣ ನೋಡಿಕೊಳ್ಳಿ ಎಂದು ಉತ್ತರ ಪ್ರದೇಶ ಕಾಂಗ್ರೆಸ್‌ ಮಾಜಿ ಅಧ್ಯಕ್ಷರೂ ಆದ ರಾಜ್‌ಬಬ್ಬರ್‌ ಯೋಗಿ ಆದಿತ್ಯನಾಥ್‌ಗೆ ಸಲಹೆ ನೀಡಿದರು.

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್‌ ಗೊಗೋಯ್‌ ಮಾತನಾಡಿ, ಆರ್‌ಎಸ್‌ಎಸ್‌ ದೇಶದಲ್ಲಿ ಶಾಂತಿ ಕದಡುತ್ತಿದೆ. ಅಸ್ಸಾಂನಲ್ಲೂ ಕೂಡ ಸಮಾಜ ಹೊಡೆಯುವ ಕೆಲಸ ಮಾಡುತ್ತಿದೆ. ಅಲ್ಪಸಂಖ್ಯಾತರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಕೇಂದ್ರ ಸರ್ಕಾರದ ವೈಫಲ್ಯದಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕ ಸೃಷ್ಟಿಯಾಗುತ್ತಿದೆ. ನ್ಯಾಯಾಂಗ ಮೇಲೂ ಭರವಸೆ ಮಾಯವಾಗುತ್ತಿದೆ.

ಆದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ದೇಶದಲ್ಲಿಯೇ ಉತ್ತಮ ಆಡಳಿತ ಇಲ್ಲಿದೆ. ರಾಜ್ಯದ ಚುನಾವಣೆಯಲ್ಲಿ ಜನ ಬಿಜೆಪಿಗೆ ತಕ್ಕ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.

ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದಲ್ಲಿ ಅಪರಾಧ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗಿವೆ. ವರದಕ್ಷಿಣೆ ಕೊಲೆ ಪ್ರಕರಣ ಕಳೆದ ಒಂದು ವರ್ಷದಲ್ಲಿ ಶೇ.7 ರಷ್ಟುಹೆಚ್ಚಾಗಿವೆ. 2017-18ರಲ್ಲಿ ಉತ್ತರ ಪ್ರದೇಶಧಲ್ಲಿ 15,108 ಅತ್ಯಾಚಾರ ಪ್ರಕರಣ, 13,226 ಅಪರಹಣ, 13,392 ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿವೆ.

ಪ್ರತಿ ವರ್ಷ ಅಪರಾಧ ಚಟುವಟಿಕೆ ಹೆಚ್ಚಾಗುತ್ತಿದ್ದು, ಅತ್ಯಾಚಾರ ಪ್ರಕರಣ ಕಳೆದ ಸಾಲಿಗಿಂತ ಶೇ. 36 ರಷ್ಟು, ಅಪಹರಣ ಶೇ.33 ರಷ್ಟು, ಲೈಂಗಿಕ ದೌರ್ಜನ್ಯ ಶೇ.31 ರಷ್ಟುಸೇರಿ ಒಟ್ಟಾರೆ ಅಪರಾಧ ಪ್ರಕರಣ ಶೇ.33ರಷ್ಟುಹೆಚ್ಚಾಗಿವೆ. ಹೀಗಿದ್ದರೂ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್‌ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

Follow Us:
Download App:
  • android
  • ios