ಬೆಂಗಳೂರು :  ಬಿಜೆಪಿ ರಾಜ್ಯಸಭಾ ಸದಸ್ಯ ಎಂ.ಜೆ. ಅಕ್ಬರ್‌ ಅವರನ್ನು ನಾನು ಇತ್ತೀಚೆಗೆ ಭೇಟಿ ಮಾಡಿದ್ದು ನಿಜ. ಆದರೆ, ಈ ಭೇಟಿಯ ಉದ್ದೇಶ ಕಾಂಗ್ರೆಸ್‌ ಬಿಡುವುದಲ್ಲ. ನಾನು ಪಕ್ಷದಲ್ಲಿದ್ದುಕೊಂಡೇ ಹೋರಾಟ ಮುಂದುವರೆಸುತ್ತೇನೆ ಎಂದು ಕಾಂಗ್ರೆಸ್‌ ಶಾಸಕ ರೋಷನ್‌ ಬೇಗ್‌ ಸ್ಪಷ್ಟಪಡಿಸಿದ್ದಾರೆ. ರೋಷನ್‌ ಬೇಗ್‌ ಅವರು ಬಿಜೆಪಿ ಸೇರಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ಎಂ.ಜೆ. ಅಕ್ಬರ್‌ ಅವರನ್ನು ಭೇಟಿ ಮಾಡಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ನಿರಾಕರಿಸಿರುವ ಬೇಗ್‌ ಅವರು, ಎಂ.ಜೆ. ಅಕ್ಬರ್‌ ನನ್ನ ಹಳೆಯ ಪರಿಚಯಸ್ಥರು. ಬೆಂಗಳೂರಿಗೆ ಬಂದ ಹಿನ್ನೆಲೆಯಲ್ಲಿ ಸಹಜವಾಗಿ ಭೇಟಿ ಮಾಡಿದ್ದೆನೇ ಹೊರತು ಬಿಜೆಪಿ ಸೇರಲು ಅಲ್ಲ ಎಂದು ತಿಳಿಸಿದ್ದಾರೆ.

ಆದರೆ, ಅನಿವಾರ್ಯ ಸ್ಥಿತಿಯನ್ನು ನಿರ್ಮಾಣ ಮಾಡಿದರೆ ಹಾಗೂ ನನ್ನನ್ನು ಕೆಟ್ಟದಾಗಿ ಕಾಂಗ್ರೆಸ್‌ ನಡೆಸಿಕೊಂಡರೇ ಮುಂದಿನ ರಾಜಕೀಯ ಜೀವನದ ಆಯ್ಕೆಗಳ ಬಗ್ಗೆ ನಾನು ಮುಕ್ತವಾಗಿದ್ದೇನೆ ಎಂದರು.

ಅವರು, ಕಾಂಗ್ರೆಸ್‌ನ ರಾಜ್ಯ ನಾಯಕರ ವಿರುದ್ಧ ನನ್ನ ಹೋರಾಟವನ್ನು ಪಕ್ಷದೊಳಗಿದ್ದುಕೊಂಡೇ ನಾನು ಮುಂದುವರೆಸುತ್ತೇನೆ. ಪಕ್ಷವನ್ನು ಬಿಡುವ ಯಾವ ಉದ್ದೇಶವೂ ನನಗೆ ಇಲ್ಲ. ಆದರೆ, ಅನಿವಾರ್ಯ ಸ್ಥಿತಿಯನ್ನು ನಿರ್ಮಾಣ ಮಾಡಿದರೆ ಹಾಗೂ ನನ್ನನ್ನು ಕೆಟ್ಟದಾಗಿ ಕಾಂಗ್ರೆಸ್‌ ನಡೆಸಿಕೊಂಡರೇ ಮುಂದಿನ ರಾಜಕೀಯ ಜೀವನದ ಆಯ್ಕೆಗಳ ಬಗ್ಗೆ ನಾನು ಮುಕ್ತವಾಗಿದ್ದೇನೆ ಎಂದರು.

ಅಲ್ಲದೆ, ಆಯ್ಕೆ ಮುಕ್ತವಾಗಿಟ್ಟುಕೊಂಡಿದ್ದೇನೆ ಎಂದರೆ ಬಿಜೆಪಿ ಸೇರುತ್ತೇನೆ ಎಂದು ಭಾವಿಸುವ ಅಗತ್ಯವಿಲ್ಲ. ನಾನು ಜೆಡಿಯು ಸಹ ಸೇರಬಹುದು. ದೇಶದಲ್ಲಿ ಬದಲಾದ ರಾಜಕೀಯ ಸ್ಥಿತ್ಯಂತರ ಹಿನ್ನೆಲೆಯಲ್ಲಿ ಮುಸ್ಲಿಮರು ಭಿನ್ನ ರಾಜಕೀಯ ನಿಲುವು ತಳೆಯಬೇಕು ಎಂದು ನಾನು ಹೇಳಿದ್ದೇನೆ. ಹೀಗಾಗಿ, ನನ್ನ ಆಯ್ಕೆಯು ಸಹ ಇದೇ ರೀತಿ ಇರುತ್ತದೆ ಎಂದು ಸೂಚ್ಯವಾಗಿ ಹೇಳಿದರು.