ಗುಡಗಾಂವ್‌ : ತಾವು ನಿವಾಸಿಯಾಗಿರವ ಅಪಾರ್ಟ್‌ಮೆಂಟ್‌ನಲ್ಲೇ ವಾಸಿಸುವ ನೆರೆಹೊರೆಯ ಮಹಿಳೆಯೊಬ್ಬರಿಗೆ ಅಶ್ಲೀಲವಾದ ಇ-ಮೇಲ್‌ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದ ಕಾಂಗ್ರೆಸ್‌ ನಾಯಕಿ ಮಾರ್ಗರೇಟ್‌ ಆಳ್ವಾ ಅವರ ಪುತ್ರ ನಿಖಿಲ್‌ ಆಳ್ವ ವಿರುದ್ಧ ಗುಡಗಾಂವ್‌ ಪೊಲೀಸರು ಕೇಸ್‌ ದಾಖಲಿಸಿದ್ದಾರೆ.

ಮಹಿಳೆಯೊಬ್ಬರ ಬಗ್ಗೆ ಅಶ್ಲೀಲ ಸಂದೇಶ ಕಳಿಸಿದ ಮತ್ತು ಆಕೆಯ ಹಿಂಬಾಲಿಸಿದ ಸಂಬಂಧವಾಗಿ ಗುಡಗಾಂವ್‌ ಪೊಲೀಸರು ಡಿಸೆಂಬರ್‌ 4ರಂದು ನಿಖಿಲ್‌ ಆಳ್ವ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ತನಗೆ ನಿಖಿಲ್‌ ಆಳ್ವ ಅವರು ಇ-ಮೇಲ್‌ ಮೂಲಕ ಅಶ್ಲೀಲವಾದ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮದ ಗ್ರೂಪ್‌ ಒಂದರಲ್ಲಿಯೂ ಆಳ್ವಾ ಇದೇ ರೀತಿಯ ಸಂದೇಶ ರವಾನಿಸಿದ್ದು, ತಮ್ಮ ನೆರೆಹೊರೆಯವರು ತನ್ನ ಬಗ್ಗೆ ಇಲ್ಲ ಸಲ್ಲದ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಅಲ್ಲದೆ, ಇದಕ್ಕೆ ಪುಷ್ಟೀ ನೀಡುವಂತೆ ಕೆಲವು ಇ-ಮೇಲ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಪೊಲೀಸರಿಗೆ ಹಸ್ತಾಂತರಿಸಿರುವ ಮಹಿಳೆ, ಈ ಮೇಲ್‌ಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಗೌರವ ಕಳೆಯುವುದಾಗಿಯೂ ಬೆದರಿಕೆಯೊಡ್ಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಆರೋಪ ನಕಾರ:

ಈ ಆರೋಪವನ್ನು ತಳ್ಳಿ ಹಾಕಿರುವ ರಾಹುಲ್‌ ಗಾಂಧಿ ಆಪ್ತರಾದ ನಿಖಿಲ್‌ ಆಳ್ವ, ‘ಇದು ದ್ವೇಷದಿಂದ ಮಾಡಿದ ಆರೋಪ. ಅಪಾರ್ಟ್‌ಮೆಂಟ್‌ನಲ್ಲಿನ ಅಕ್ರಮ ನಿರ್ಮಾಣವೊಂದರ ಸಂಬಂಧ ನನ್ನ ಹಾಗೂ ಮಹಿಳೆ ನಡುವೆ ಜಟಾಪಟಿ ನಡೆದಿತ್ತು. ಈ ಮಹಿಳೆ ವಿರುದ್ಧ ಅಪಾರ್ಟ್‌ಮೆಂಟ್‌ ಸೊಸೈಟಿಗೆ ದೂರು ದಾಖಲಿಸಿದ್ದೆ. ಇದೇ ಕಾರಣಕ್ಕೆ ಮಹಿಳೆ ತನ್ನ ವಿರುದ್ಧ ಇಂಥ ಸುಳ್ಳು ಆರೋಪ ಹೊರಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಅಲ್ಲದೆ, ತನ್ನ ತಾಯಿ ಬಗ್ಗೆಯೂ ಮಹಿಳೆ ಅನುಚಿತವಾಗಿ ಮಾತನಾಡಿದ್ದಾರೆ’ ಎಂದು ನಿಖಿಲ್‌ ದೂರಿದ್ದಾರೆ. ಆದರೆ, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.