ಬೆಂಗಳೂರು : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ. 27 ರಂದು ಮಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದು, ಇದೇ ವೇಳೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ವೀರಪ್ಪ ಮೊಯ್ಲಿ ನೇತೃತ್ವದ ಚುನಾವಣಾ ಪ್ರಣಾಳಿಕೆ ಸಮಿತಿಯು ಪ್ರಣಾಳಿಕೆ ಸಿದ್ಧಪಡಿಸಿದೆ. ರಾಜ್ಯದ ನಾಲ್ಕು ವಿಭಾಗಗಳಿಗೆ ಪ್ರತ್ಯೇಕವಾಗಿ ಪ್ರಣಾಳಿಕೆ ಸಿದ್ಧಪಡಿಸಿದ್ದು, ಏಪ್ರಿಲ್‌ 27 ರಂದು ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯನ್ನು ರಾಹುಲ್‌ಗಾಂಧಿ ಮಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಸ್ಯಾಂ ಪಿತ್ರೋಡಾ ಹಾಗೂ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿಯಲ್ಲಿ ಶಶಿ ತರೂರ್‌ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಏಕ ಕಾಲದಲ್ಲಿ ನಾಲ್ಕೂ ವಿಭಾಗದ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಗೊಬ್ಬ ವೀಕ್ಷಕರ ನೇಮಕ: ವಿಧಾನಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಲು ಪ್ರಯತ್ನ ಮುಂದುವರೆಸಿರುವ ಎಐಸಿಸಿಯು ಪ್ರತಿ ಜಿಲ್ಲೆಗೂ ವೀಕ್ಷಕರನ್ನು ನೇಮಿಸಿದೆ. ಚುನಾವಣೆ ಮುಗಿಯುವವರೆಗೂ ವೀಕ್ಷಕರು ಜಿಲ್ಲೆಯಲ್ಲಿಯೇ ಉಳಿದು ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲು ಪೂರಕ ಕೆಲಸ ಮಾಡಲಿದ್ದಾರೆ. ಸೋಮವಾರ ನೂತನ ವೀಕ್ಷಕರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಭೆ ಕರೆದಿದ್ದು, ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸಲಹೆ ಸೂಚನೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.