ಬೆಂಗಳೂರು: ರಾಜಕೀಯ ಜಿದ್ದಾಜಿದ್ದಿನ ಸಮರ ಹಾಗೂ ಚುನಾವಣಾ ಅಕ್ರಮಗಳಿಂದ ಜನರ ಗಮನ ಸೆಳೆದಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲವಿನ ಅಧಿಕೃತ ಘೋಷಣೆ ಬಾಕಿ ಇದೆ. 

ಕಾಂಗ್ರೆಸ್ಸಿನ ಹಾಲಿ ಶಾಸಕ ಮುನಿರತ್ನ, ಜೆಡಿಎಸ್‌ನ ಜಿ.ಎಚ್‌.ರಾಮಚಂದ್ರ, ಬಿಜೆಪಿಯ ಪಿ.ಮುನಿರಾಜು ಗೌಡ ಹಾಗೂ ಹುಚ್ಚ ವೆಂಕಟ್‌ ಸೇರಿ 14 ಮಂದಿ ಕಣದಲ್ಲಿದ್ದರು. 

ಇತ್ತೀಚೆಗೆ ಮುಗಿದಿದ್ದ ವಿಧಾನಸಭಾ ಚುನಾವಣೆ ಸಮಯದಲ್ಲೇ ರಾಜರಾಜೇಶ್ವರಿ ನಗರ ಕ್ಷೇತ್ರವು ಚುನಾವಣೆ ಎದುರಿಸಬೇಕಾಗಿತ್ತು. ಆದರೆ ಈ ಕ್ಷೇತ್ರದ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹ ಪತ್ತೆಯಾಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆ ಮುಂದೂಡಲ್ಪಟ್ಟಿತ್ತು.

ಹೆಚ್ಚಿದರೂ ಹೆಚ್ಚಾಗದ ಕೈ ಬಲ

ಅಧಿಪತ್ಯ ಸ್ಥಾಪನೆಗೆ ದೋಸ್ತಿ ಸರ್ಕಾರದ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪೈಪೋಟಿಯಲ್ಲಿದ್ದವು. ಇದೀಗ 78 ಸದಸ್ಯ ಬಲವಿದ್ದ ಕಾಂಗ್ರೆಸ್‌ಗೆ ಮತ್ತೊಂದು ಸೇರ್ಪಡೆಯಾದಂತಾಗಿದೆ. ಆದರೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ಮತ್ತೊಂದು ಸ್ಥಾನ ತೆರವಿದ್ದು, ಪಕ್ಷದ ಬಲಾ ಬಲ ಅಷ್ಟೇ ಇದ್ದಂತಾಗಿದೆ.

ಈ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಖುದ್ದು ಪ್ರಚಾರ ನಡೆಸಿದ್ದರು. ಅಲ್ಲದೇ ಪಕ್ಷದ ಪ್ರಾಬಲ್ಯ ಮೆರೆಯಲು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿ, ಕೈ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವ ಯತ್ನವೂ ನಡೆದಿತ್ತು. ಆದರೆ, ಮಣಿರತ್ನ ತಮ್ಮ ಕ್ಷೇತ್ರದಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ, ಯಾವುದೇ ಒತ್ತಡಕ್ಕೆ ಮಣಿಯದೇ ಸ್ಪರ್ಧೆಯಿಂದ ಹಿಂದೆ ಸರಿಯದಂತೆ ನಿರ್ಧರಿಸಿದ್ದರು.

ಮತಚೀಟಿ ಅಕ್ರಮ: ಕಣ್ಣೀರು ಹಾಕಿದ ಮುನಿರತ್ನ

ಮೈತ್ರಿ ಸರ್ಕಾರಕ್ಕೆ ರಾಜಕೀಯವಾಗಿ ಹೊಡೆತ ನೀಡಲು ಜಿದ್ದಿಗೆ ಬಿದ್ದಿರುವ ಬಿಜೆಯೂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಪಕ್ಷದ ಹುರಿಯಾಳು ಮುನಿರಾಜು ಗೌಡ ಪರ ಕೇಸರಿ ಪಡೆ ಭರ್ಜಿರಿ ಪ್ರಚಾರ ನಡೆಸಿತ್ತು.

ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ಸು ಕಂಡಿದ್ದೇವೆ. ರಾಜರಾಜೇಶ್ವರಿ ನಗರದ ಚುನಾವಣೆಯ ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕಾಂಗ್ರೆಸ್ ಗೆದ್ದಿದೆ, ಹೀಗಾಗಿ ತಲೆ ಕೆಡಿಸಿಕೊಂಡಿಲ್ಲ. ಎರಡು ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಲು ನಾನೇ ಹೇಳಿದ್ದೆ.
- ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ


ಇದು ಹಣದ ಬಲ ಗೆಲುವು. ಹಣದ ಬಲದ ಮುಂದೆ ಯಾವುದು ನಡೆಯಲ್ಲ. ಆದರೂ ಜನಾದೇಶಕ್ಕೆ ತಲೆಬಾಗುತ್ತೇವೆ. ಜೆಡಿಎಸ್, ಕಾಂಗ್ರೆಸ್ ಒಳ ಒಪ್ಪಂದದ ಬಗ್ಗೆ ಗೊತ್ತಿರೋದೇ, ಅದನ್ನ ಚರ್ಚೆ ಮಾಡಬೇಕಾ...?
- ಯಡಿಯೂರಪ್ಪ, ಮಾಜಿ ಸಿಎಂ