ನವದೆಹಲಿ(ಅ.22): ಭಾರತೀಯ ಸೇನೆ ಗಡಿಯಾಚೆಗೆ ಕಾರ್ಯಾಚರಣೆ ಕೈಗೊಂಡಾಗಲೆಲ್ಲಾ ಅದನ್ನು ಪ್ರಶ್ನಿಸುವ ಪರಿಪಾಠ ಬೆಳೆಸಿಕೊಂಡಿರುವ ವಿಪಕ್ಷ ಕಾಂಗ್ರೆಸ್, ಮೊನ್ನೆಯಷ್ಟೇ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೈಗೊಂಡ ಕಾರ್ಯಾಚರಣೆಗೆ ಅಪಸ್ವರ ಎತ್ತಿದೆ.

ಪಿಒಕೆ ಒಳಗೆ ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ಶ್ಲಾಘಿಸಿರುವ ಕಾಂಗ್ರೆಸ್, ಆದರೆ ಪ್ರತಿ ಬಾರಿ ದೇಶದಲ್ಲಿ ಮಹತ್ವದ ಚುನಾವಣೆಗಳಿದ್ದಾಗಲೇ ಸರ್ಜಿಕಲ್ ಸ್ಟ್ರೈಕ್ ಏಕಾಗುತ್ತದೆ ಎಂದು ಪ್ರಶ್ನಿಸಿ ಅಚ್ಚರಿ ಮೂಡಿಸಿದೆ.

ಗಡಿಯಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ: PoKಯಲ್ಲಿದ್ದ ಉಗ್ರರ 4 ಕ್ಯಾಂಪ್ ಉಡೀಸ್‌!

ಇದೇ ಮೊದಲ ಬಾರಿಗೆ ಸರ್ಜಿಕಲ್ ದಾಳಿಗಳ ಕುರಿತು ಮಾತನಾಡಿರುವ ರಾಜ್ಯ ಕಾಂಗ್ರೆಸ್ ನಾಯಕರು, ಚುನಾವಣೆ ಸಂದರ್ಭದಲ್ಲಿ ಸರ್ಜಿಕಲ್ ದಾಳಿಯಾಗುತ್ತದೆ ಎಂದು ಹೇಳುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

ಈ ಕುರಿತು ಮಾತನಾಡಿರುವ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ, ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸರ್ಜಿಕಲ್ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದ್ದಾರೆ.

ಇಂತದ್ದೇ ಅಭಿಪ್ರಾಯವನ್ನು ಕಾಂಗ್ರೆಸ್’ನ ರಾಷ್ಟ್ರೀಯ ನಾಯಕರೂ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆ ಮುನ್ನಾ ದಿನ ಸರ್ಜಿಕಲ್ ದಾಳಿ ನಡೆದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಅಖಿಲೇಶ್ ಸಿಂಗ್, ಮಹತ್ವದ ಚುನಾವಣೆಗಳಿದ್ದಾಗ ಸರ್ಜಿಕಲ್ ದಾಳಿಗಳು ನಡೆಯುತ್ತಿರುವುದು ಅನುಮಾನ ಮೂಡಿಸಿದೆ ಎಂದು ಹೇಳಿದ್ದಾರೆ.