ಬೆಂಗಳೂರು :  ಹತ್ಯೆಗೈದ ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಸಾಮಾಜಿ ಕಾರ್ಯಕರ್ತ ನರಸಿಂಹಮೂರ್ತಿ ಮಾನವ ಹಕ್ಕುಗಳ ಆಯೋಗಕ್ಕೆ ಬುಧವಾರ ದೂರು ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಸಂವಿಧಾನಾತ್ಮಕವಾಗಿ ಪ್ರಮಾಣವಚನ ಸ್ವೀಕರಿಸಿರುವ ಮುಖ್ಯಮಂತ್ರಿಗಳ ಹೇಳಿಕೆ ಸಂವಿಧಾನದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಂದ ಸ್ಪಷ್ಟನೆ ಕೇಳಬೇಕು ಎಂದು ದೂರಿನಲ್ಲಿ ಕೋರಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಯಾವುದೇ ಕಾರಣಕ್ಕೂ ಈ ರೀತಿಯ ಹೇಳಿಕೆ ನೀಡಬಾರದು. ಕಾನೂನು ಬಾಹೀರ ಘಟನೆ ನಡೆದ ಸಂದರ್ಭದಲ್ಲಿ ಸೂಕ್ತ ತನಿಖೆಗೆ ಆದೇಶಿಸಬೇಕು. ಆದರೆ, ಭಾವೋದ್ವೇಗಕ್ಕೆ ಒಳಗಾಗಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪೊಲೀಸ್‌ ಇಲಾಖೆ ಮತ್ತು ನ್ಯಾಯಾಲಯ ಇದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿದ್ದಲ್ಲಿ ಮಾತ್ರ ಶಿಕ್ಷೆಗೆ ಗುರಿಪಡಿಸಬೇಕು ಎಂಬ ನಿಯಮ ಇದೆ. ಈ ರೀತಿಯ ಹೇಳಿಕೆ ನೀಡುವುದು ಬಗ್ಗೆ ಸ್ಪಷ್ಟನೆ ತೆಗೆದುಕೊಳ್ಳಬೇಕು ಎಂದು ಕೋರಿದ್ದಾರೆ.