Asianet Suvarna News Asianet Suvarna News

ಎನ್.ಎ.ಹ್ಯಾರೀಸ್‌ಗೆ ಸಿಗುತ್ತಾ ಟಿಕೆಟ್? ಟಿಕೆಟ್ ಲಾಬಿ ತಣಿಸಲು ಸಿಎಂ ಕಸರತ್ತು

- ಟಿಕೆಟ್‌ ಲಾಬಿ ತಣಿಸಲು ಸಿಎಂ ಕಡೇ ಕ್ಷಣದ ಕಸರತ್ತು

- ದಿಲ್ಲಿಗೆ ಹೊರಡುವವರೆಗೂ ಗೊಂದಲ ಬಗೆಹರಿಸಲು ಯತ್ನ

- ಟಿಕೆಟ್‌ ಸಿಗದವರು ಪಕ್ಷಕ್ಕಾಗಿ ಕೆಲಸ ಮಾಡಲೇಬೇಕು ಎಂದು ತಾಕೀತು

CM Siddaramaiah is trying woo ticket aspirants of Congress

ಬೆಂಗಳೂರು: ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿಬಿಡುಗಡೆಗೆ ಕ್ಷಣಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುವ ಕೊನೆ ಕ್ಷಣದವರೆಗೂ ಆಕಾಂಕ್ಷಿಗಳು ಹಾಗೂ ಜಿಲ್ಲಾ ಮುಖಂಡರ ಸಭೆ ನಡೆಸಿ ಗೊಂದಲ ಬಗೆಹರಿಸುವ ಪ್ರಯತ್ನ ಮಾಡಿದರು.

ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಲು ಗುರುವಾರ ಸಂಜೆ ದೆಹಲಿಗೆ ತೆರಳುವ ಮುನ್ನ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿನ ಗೊಂದಲವಿರುವ ಕ್ಷೇತ್ರಗಳ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿದರು. ಈ ಜಿಲ್ಲೆಗಳ ನಾಯಕರನ್ನು ಕೃಷ್ಣಾಗೆ ಕರೆಸಿಕೊಂಡು ಮಾತುಕತೆ ನಡೆಸಿದರು.

ಈ ವೇಳೆ ಪ್ರತಿ ಕ್ಷೇತ್ರದಿಂದಲೂ ಇಬ್ಬರು ಅಥವಾ ಮೂರು ಮಂದಿ ಅಭ್ಯರ್ಥಿಗಳು ಇದ್ದಾರೆ. ಇದರಲ್ಲಿ ಗೆಲ್ಲುವ ಮಾನದಂಡ ಇಟ್ಟುಕೊಂಡು ಹೈಕಮಾಂಡ್‌ ನಾಳೆಯ ಸಭೆಯಲ್ಲಿ ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡಲಿದೆ. ಆಕಾಂಕ್ಷಿಗಳಲ್ಲಿ ಯಾರಿಗೇ ಟಿಕೆಟ್‌ ದೊರೆತರೂ ಮತ್ತೊಬ್ಬರು ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು. ಈ ಮೂಲಕ ಪಕ್ಷವನ್ನು ಗೆಲ್ಲಿಸಬೇಕು. ಟಿಕೆಟ್‌ ಕೈತಪ್ಪುವ ಅಭ್ಯರ್ಥಿಗಳಿಗೆ ಮುಂದೆ ಪಕ್ಷವು ನ್ಯಾಯ ಒದಗಿಸಲಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಗೆಲುವಿಗಾಗಿ ಶ್ರಮಿಸಬೇಕು ಎಂದು ಸೂಚಿಸಿದರು

ಇದೇ ವೇಳೆ ಬೆಳಗಾವಿ ಜಿಲ್ಲೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಬಗೆಹರಿಯದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತು ಮಾತುಕತೆ ನಡೆಸಿದ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಆಂತರಿಕ ಕಲಹಗಳಿಗೆ ಆಸ್ಪದ ಕೊಡಬೇಡಿ. ಇಡೀ ಜಿಲ್ಲೆಯಲ್ಲಿ ಪಕ್ಷ ಒಟ್ಟಾಗಿ ದುಡಿಯಬೇಕು. ಆಗ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು.

ಇದರ ನಡುವೆ ಟಿಕೆಟ್‌ ಬಗ್ಗೆ ಅನುಮಾನವಿರುವ ಕೆಲವು ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೆಟ್‌ ಖಾತ್ರಿಪಡಿಸಿಕೊಂಡರು. ಗೊಂದಲದಲ್ಲಿದ್ದ ಮುಖಂಡರು ತಮಗೆ ಹಾಗೂ ತಮ್ಮವರಿಗೆ ಟಿಕೆಟ್‌ ನೀಡುವಂತೆ ಪರೇಡ್‌ ನಡೆಸಿದರು. ಸಿಇಸಿ ಸಭೆ ವೇಳೆ ನಮ್ಮ ಹೆಸರುಗಳ ಮೇಲೆ ನಿಗಾ ಇಡಿ ಎಂದು ಮನವಿ ಮಾಡಿಕೊಂಡರು.

ಇದೇ ವೇಳೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧೆ ಬಗ್ಗೆಯೂ ಮಹತ್ವದ ಮಾತುಕತೆ ನಡೆಸಿದ್ದು, ಸಿಎಂ ಚಾಮುಂಡೇಶ್ವರಿ ಹೊರತಾಗಿ ಮತ್ತೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಹೈಕಮಾಂಡ್‌ ಹಸಿರು ನಿಶಾನೆ ತೋರಿದೆ. ಹೀಗಾಗಿ ಬಾದಾಮಿ ಕ್ಷೇತ್ರದ ಮುಖಂಡರು ಎಸ್‌.ಆರ್‌. ಪಾಟೀಲ್‌ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಬಾದಾಮಿಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿದರು. ಹಾಲಿ ಶಾಸಕ ಹಾಗೂ ಟಿಕೆಟ್‌ ಆಕಾಂಕ್ಷಿ ಚಿಮ್ಮನಕಟ್ಟಿಅವರ ಮನವೊಲಿಸಲು ಸಿಎಂ ಯಶಸ್ವಿಯಾಗಿದ್ದಾರೆ. ಜತೆಗೆ ಬಾದಾಮಿಯಿಂದ ಸ್ಪರ್ಧಿಸುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಅಖಂಡ ಪರ ಜಮೀರ್‌ ಬ್ಯಾಟ್‌:

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾದ ಏಳು ಶಾಸಕರಲ್ಲಿ ಅಖಂಡ ಶ್ರೀನಿವಾಸ್‌ಮೂರ್ತಿ ಟಿಕೆಟ್‌ ಕುರಿತು ಅನುಮಾನ ಉಂಟಾಗಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಗುರುವಾರ ಜಮೀರ್‌ ಅಹ್ಮದ್‌ ಖಾನ್‌ ಅಖಂಡ ಶ್ರೀನಿವಾಸ್‌ ಮೂರ್ತಿ ಪರ ಮಾತುಕತೆ ನಡೆಸಿದರು.

ಈ ಕ್ಷೇತ್ರದಲ್ಲಿ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಪ್ರಸನ್ನಕುಮಾರ್‌ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂಬ ವದಂತಿ ಹಿನ್ನೆಲೆಯಲ್ಲಿ ಸಿಎಂ ಭೇಟಿ ಮಾಡಿದ ಅವರು, ಅಖಂಡ ಶ್ರೀನಿವಾಸಮೂರ್ತಿಗೆ ಟಿಕೆಟ್‌ ನೀಡಬೇಕು. ನೀವು ಕೊಟ್ಟಮಾತು ನಂಬಿಕೊಂಡು ಪಕ್ಷ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಹೈಕಮಾಂಡ್‌ ಹಂತದಲ್ಲಿ ಪ್ರಭಾವ ಬೀರಿ ಇವರಿಗೂ ಟಿಕೆಟ್‌ ಖಾತರಿಪಡಿಸಬೇಕು ಎಂದು ಮನವಿ ಮಾಡಿದರು ಎನ್ನಲಾಗಿದೆ.

ಈ ಬಗ್ಗೆ ಬಳಿಕ ಪ್ರತಿಕ್ರಿಯಿಸಿದ ಜಮೀರ್‌, ನಮ್ಮ ಏಳೂ ಮಂದಿಗೆ ಟಿಕೆಟ್‌ ನೀಡಲು ಎಲ್ಲಾ ನಾಯಕರೂ ಒಪ್ಪಿಗೆ ನೀಡಿದ್ದಾರೆ. ಕಾಂಗ್ರೆಸ್‌ ನುಡಿದಂತೆ ನಡೆಯುವ ಪಕ್ಷ ಎಂದರು.

ಟಿಕೆಟ್‌ಗಾಗಿ ಎನ್‌.ಎ. ಹ್ಯಾರಿಸ್‌ ಕಸರತ್ತು:

ಇದೆ ವೇಳೆ ಪುತ್ರ ನಲಪಾಡ್‌ ಹಲ್ಲೆ ಪ್ರಕರಣದಿಂದ ಆಗಿರುವ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಶಾಂತಿನಗರ ಟಿಕೆಟ್‌ ತಪ್ಪಲಿದೆ ಎಂಬ ಕಾರಣಕ್ಕೆ ಎನ್‌.ಎ. ಹ್ಯಾರಿಸ್‌ ಗುರುವಾರ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದರು. ಟಿಕೆಟ್‌ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ ಅವರು, ಚಿಕ್ಕ ತಪ್ಪನ್ನು ವಿರೋಧಪಕ್ಷಗಳು ದೊಡ್ಡದು ಮಾಡಿವೆ. ವಾಸ್ತವವಾಗಿ ಘಟನೆಯಿಂದ ಕ್ಷೇತ್ರದಲ್ಲಿ ಯಾವುದೇ ಆಡಳಿತ ವಿರೋಧಿ ಅಲೆ ಉಂಟಾಗಿಲ್ಲ. ಕಾಂಗ್ರೆಸ್‌ ಮತ ಬ್ಯಾಂಕ್‌ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಟಿಕೆಟ್‌ ನೀಡುವಂತೆ ಮನವಿ ಹ್ಯಾರಿಸ್‌ ಮನವಿ ಮಾಡಿದರು. ಆದರೆ, ಈ ಬಗ್ಗೆ ಸಿಎಂ ಯಾವುದೇ ಖಚಿತ ಅಭಿಪ್ರಾಯ ತಿಳಿಸಿಲ್ಲ ಎಂದು ತಿಳಿದುಬಂದಿದೆ.

ಎಂ.ಆರ್‌. ಸೀತಾರಾಂ ಮಲ್ಲೇಶ್ವರದಿಂದ ಕಣಕ್ಕೆ?

ಬೆಂಗಳೂರು ನಗರದಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಆರ್‌. ಸೀತಾರಾಂ ಅವರನ್ನು ಕರೆಸಿ ಗುರುವಾರ ಮಾತುಕತೆ ನಡೆಸಿದರು. ಮಲ್ಲೇಶ್ವರನಲ್ಲಿ ಕಣಕ್ಕಿಳಿಯುವಂತೆ ಮನವೊಲಿಸಲು ಯತ್ನಿಸಿದ್ದು, ಹಣ ಹಾಗೂ ಹೆಸರಿನ ಬಲ ಇರುವ ತಾವು ರಾಜಕೀಯವಾಗಿ ಉತ್ತಮ ಹೆಸರು ಹೊಂದಿದ್ದೀರಿ. ಹೀಗಾಗಿ ಬಿಜೆಪಿ ಪ್ರಬಲ ಪೈಪೋಟಿ ಕೊಡಲು ನೀವು ಸ್ಪರ್ಧಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು. ಈ ವೇಳೆ ಸೀತಾರಾಂ, ಹೈಕಮಾಂಡ್‌ ಸೂಚನೆಯಂತೆ ನಡೆದುಕೊಳ್ಳುವುದಾಗಿ ಹೇಳಿದರು ಎನ್ನಲಾಗಿದೆ.

Follow Us:
Download App:
  • android
  • ios