ಬೆಂಗಳೂರು (ಜ. 26): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬರುವ ಫೆ.8 ರಂದು 2019-10 ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಫೆ.6 ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮರುದಿನ 7 ರಂದು ಯಾವುದೇ ಕಲಾಪ ಇರುವುದಿಲ್ಲ. 8 ರಂದು ಮಧ್ಯಾಹ್ನ 12.30 ಕ್ಕೆ ಬಜೆಟ್ ಮಂಡನೆಯಾಗಲಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕುಮಾರಸ್ವಾಮಿ ಅವರು ಎರಡನೇ ಬಾರಿ ಬಜೆಟ್ ಮಂಡಿಸಲಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜಭವನಕ್ಕೆ ತೆರಳಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಫೆ.15 ರ ವರೆಗೆ ಅಧಿವೇಶನ ನಡೆಯಲಿದೆ. ಸದ್ಯದ ಕಾರ್ಯಕ್ರಮ ಪಟ್ಟಿ ಪ್ರಕಾರ, ರಾಜ್ಯಪಾಲರ ಭಾಷಣ ಮತ್ತು ಬಜೆಟ್ ಮಂಡನೆ ಹೊರತುಪಡಿಸಿದರೆ ಐದು ದಿನಗಳ ಕಾಲ ಉಭಯ ಸದನಗಳ ಕಲಾಪ ನಡೆಯಲಿದೆ.