ಹಾಸನ  :  ಸಹಕಾರ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಒಂದು ಲಕ್ಷ ರುಪಾಯಿವರೆಗೆ ರೈತರ ಸಾಲ ಮನ್ನಾ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೂ ರೈತರು ಮಾಡಿದ 2 ಲಕ್ಷ ರುಪಾಯಿ ವರೆಗಿನ ಸಾಲ ಮನ್ನಾ ಮಾಡಲಿದೆ. ನಾಲ್ಕು ಹಂತಗಳಲ್ಲಿ ನಡೆಯಲಿರುವ ಈ ಸಾಲ ಮನ್ನಾ ಕುರಿತು ಆ.16 ರಂದೇ ಅಧಿಕೃತ ಘೋಷಣೆ ಹೊರಬೀಳಲಿದೆ.

ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಬಹಿರಂಗಪಡಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ಗಳೂ ಒಪ್ಪಿವೆ, 2 ಲಕ್ಷ ರುಪಾಯಿವರೆಗಿನ ಸಾಲ ನಾಲ್ಕು ಹಂತಗಳಲ್ಲಿ ಮನ್ನಾ ಆಗಲಿದೆ. ಇದಕ್ಕೆ ಸರ್ಕಾರ 37000 ಕೋಟಿ ರು. ಭರಿಸಬೇಕಾಗುತ್ತದೆ. ಕೊಟ್ಟಮಾತಿನಂತೆ ಸಮ್ಮಿಶ್ರ ಸರ್ಕಾರ ರೈತರ ಪೂರ್ಣ ಸಾಲವನ್ನು ಹಂತ ಹಂತವಾಗಿ ಮನ್ನಾ ಮಾಡಲು ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ರೈತರು ಖಾಸಗಿ ಸಾಲ ಮಾಡುವುದನ್ನು ತಪ್ಪಿಸಲು ಸರ್ಕಾರದಿಂದ ಬಡ್ಡಿರಹಿತ ಸಾಲ ನೀಡಲೂ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಆರ್ಥಿಕ ಶಿಸ್ತು ಉಲ್ಲಂಘಿಸಿಲ್ಲ: ಸಾಲ ಮನ್ನಾ ಮಾಡುವ ಮೂಲಕ ರಾಜ್ಯದ ಆರ್ಥಿಕ ಶಿಸ್ತನ್ನು ಸರ್ಕಾರ ಉಲ್ಲಂಘಿಸಿಲ್ಲ. ಬದಲಿಗೆ ಸೋರಿಕೆ ಆಗುವುದನ್ನು ತಡೆಗಟ್ಟುವುದು ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸಲಾಗುತ್ತದೆ. ಜಿಎಸ್‌ಟಿಯಿಂದ ಮ್ಯಾಚಿಂಗ್‌ ಗ್ರ್ಯಾಂಟ್‌ ಅನ್ನು ಕೇಂದ್ರದಿಂದ ಪಡೆಯಲಾಗುತ್ತಿದೆ. ಅಬಕಾರಿ ಸೇರಿ ನಾನಾ ಇಲಾಖೆಗಳಲ್ಲಿ ಆಗುತ್ತಿರುವ ಸೋರಿಕೆ ನಿಲ್ಲಿಸಲಾಗುತ್ತಿದೆ ಎಂದರು.

ಶೇ.32.7ರಷ್ಟುಆದಾಯ ಹೆಚ್ಚಳ: 2018 ಜುಲೈ ವರೆಗೆ .31,303 ಕೋಟಿ ಆದಾಯ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು .1332 ಕೋಟಿಯಷ್ಟುಹೆಚ್ಚು. ಅಂದರೆ ಕಳೆದ ಆರ್ಥಿಕ ಸಾಲಿಗೆ ಹೋಲಿಸಿದರೆ ಈಗ ಶೇ.32.7ರಷ್ಟುಆದಾಯ ಹೆಚ್ಚಳವಾಗಿದೆ. ಮೋಟಾರ್‌ ವಾಹನ ತೆರಿಗೆಯಿಂದ ಶೇ.4.3ರಷ್ಟು, ನೋಂದಣಿ, ಮುಂದ್ರಾಂಕದಿಂದ ಶೇ.18, ವಾಣಿಜ್ಯ ತೆರಿಗೆಯಿಂದ ಶೇ.0.09 ರಷ್ಟುಹೆಚ್ಚಿಗೆ ತೆರಿಗೆ ಸಂಗ್ರಹಿಸಲಾಗಿದೆ. ಇದರಿಂದಾಗಿ ಸಾಲ ಮನ್ನಾ ಸರ್ಕಾರಕ್ಕೆ ಹೊರೆಯಾಗಿ ಕಾಣುತ್ತಿಲ್ಲ ಎಂದು ತಮ್ಮ ನಿರ್ಧಾರವನ್ನು ಕುಮಾರಸ್ವಾಮಿ ಸಮರ್ಥಿಸಿಕೊಂಡರು.

ನಾನೇ ಸಭೆ ನಡೆಸುತ್ತೇನೆ: ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯುವ ಬೆಳೆಗಳನ್ನು ಬೆಳೆಯಲು ಆಂಧ್ರ ಮಾದರಿಯ ಶೂನ್ಯ ಬಂಡವಾಳ ಕೃಷಿ ಕ್ರಮ ಜಾರಿ ಮಾಡಲಾಗುತ್ತಿದೆ. ಇದಕ್ಕೆ ವಿಪ್ರೋ ಕಂಪನಿಯ ಅಜಿಂ ಪ್ರೇಮ್‌ಜಿ ಸಹಕಾರ ನೀಡಲಿದ್ದಾರೆ. ಯಾವ ಹಮಾಮಾನದಲ್ಲಿ ಯಾವ ಬೆಳೆಯಬೇಕು, ಹೇಗೆ ಬೆಳೆಯಬೇಕು, ಕೃಷಿ ಪದ್ಧತಿ ಬದಲಾವಣೆ ಮತ್ತಿತರ ವಿಷಯಗಳ ಅರಿವು ಮೂಡಿಸಲು ಪ್ರತಿ ತಿಂಗಳ ಒಂದು ದಿನ ಪಂಚಾಯ್ತಿ ಅಥವಾ ಹೋಬಳಿ ಮಟ್ಟದಲ್ಲಿ ತೋಟಗಾರಿಕೆ, ಕೃಷಿ, ಕಂದಾಯ ಅಧಿಕಾರಿಗಳೊಂದಿಗೆ ನಾನೇ ಖುದ್ದು ಸಭೆ ನಡೆಸಿ, ರೈತರೊಡನೆ ಸಂವಾದ ನಡೆಸುತ್ತೇನೆ ಎಂದು ಮಾಹಿತಿ ನೀಡಿದರು.

ಜಮೀನು ಕೆಲಸ ಮಾಡಿ ನಾನು ಇಪ್ಪತ್ತರಿಂದ ಮೂವತ್ತು ವರ್ಷಗಳಾಗಿವೆ. ಈಗ ಬತ್ತ ನಾಟಿ ಎಷ್ಟುಕಷ್ಟಎಂಬುದು ಅರಿವಾಗಿದೆ. ಸಮಿಶ್ರ ಸರ್ಕಾರದ ಆದ್ಯತೆ ಇನ್ನೇನಿದ್ದರೂ ರೈತರ ಏಳಿಗೆಯತ್ತ ಎಂದು ಇದೇ ವೇಳೆ ಸಿಎಂ ಘೋಷಣೆ ಮಾಡಿದರು.