ಮಂಡ್ಯ :  ಕಳೆದ ಆಸಗ್ಟ್  ತಿಂಗಳಲ್ಲಿ ಮಂಡ್ಯಕ್ಕೆ ತೆರಳಿ ಭತ್ತದ ನಾಟಿ ಮಾಡಿದ್ದ ಸಿಎಂ ಕುಮಾರಸ್ವಾಮಿ ಶುಕ್ರವಾರ ಭತ್ತದ ಕಟಾವು ಮಾಡಲು ಹೋಗಲಿದ್ದಾರೆ. 

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಆಗಸ್ಟ್ 11 ರಂದು 5 ಎಕರೆ ಜಮೀನಿನಲ್ಲಿ ಸಿಎಂ ನಾಟಿ ಮಾಡಿದ್ದ ಭತ್ತದ ಪೈರು ಬೆಳೆದು ನಿಂತಿದ್ದು, ಸೊಗಸಾಗಿ ಬೆಳೆದು ನಿಂತ ಭತ್ತದ ಪೈರನ್ನು ಕುಮಾರಸ್ವಾಮಿ ಕಟಾವು ಮಾಡಲಿದ್ದಾರೆ. 

ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಸಲುವಾಗಿ 300ಜನ ಕೃಷಿಕರೊಂದಿಗೆ ಗದ್ದೆಗಿಳಿದು ಮುಖ್ಯಮಂತ್ರಿ ಭತ್ತದ ಪೈರು ನೆಟ್ಟಿದ್ದು ಇದೀಗ ಸ್ಥಳೀಯ ರೈತರ ಒತ್ತಾಯದ ಮೇರೆಗೆ ಕಟಾವಿಗೂ ತೆರಳುತ್ತಿದ್ದಾರೆ. 

ಶುಕ್ರವಾರ ಮಧ್ಯಾಹ್ನ 3ಗಂಟೆಗೆ ಅರಳಕುಪ್ಪೆ ಗ್ರಾಮಕ್ಕೆ ತೆರಳಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. 

ಇನ್ನು ಕಟಾವು ಮಾಡಿದ ಬಳಿಕ ಸಿಎಂ ಭತ್ತಕ್ಕೆ ಪೂಜೆ ಸಲ್ಲಿಸಲಿದ್ದು, ಈ ಜಮೀನಿನಲ್ಲಿ ಬೆಳೆದ ಕ್ವಿಂಟಾಲ್ ಭತ್ತವನ್ನು ಸಿಎಂಗೆ ನೀಡಲು ಮಾಲಿಕರು ನಿರ್ಧರಿಸಿದ್ದಾರೆ.