Asianet Suvarna News Asianet Suvarna News

ಮೋದಿ ಬೆನ್ನಲ್ಲೇ 'ಚೌಕೀದಾರ'ರಾದ ಬಿಜೆಪಿಗರು: ಟ್ವಿಟರ್ ಖಾತೆಗಳು ಏಕಾಏಕಿ ಬದಲು!

ಟ್ವಿಟರ್ ನಲ್ಲಿ ಬದಲಾಯ್ತು ಮೋದಿ ಹೆಸರು| ಮೋದಿ ಬೆನ್ನಲ್ಲೇ 'ಚೌಕೀದಾರ'ರಾದ ಬಿಜೆಪಿಗರು| ಟ್ವಿಟರ್ ಖಾತೆಗಳು ಏಕಾಏಕಿ ಬದಲು

Chowkidar Narendra Modi PM Adds Prefix On Twitter Top Leaders Follow
Author
Bangalore, First Published Mar 17, 2019, 2:38 PM IST

ನವದೆಹಲಿ[ಮಾ.17]: ಪ್ರಧಾನಿ ಮೋದಿ ಟ್ವಿಟರ್ ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. 'ಚೌಕೀದಾರ್ ನರೇಂದ್ರ ಮೋದಿ' ಅವರ ಹೊಸ ಹೆಸರು. ಆದರೆ ಹೀಗೆ ತಮ್ಮ ಹೆಸರು ಬದಲಾಯಿಸಿಕೊಂಡವರು ಮೋದಿ ಒಬ್ಬರೇ ಅಲ್ಲ. ಅವರೊಂದಿಗೆ ಬಿಜೆಪಿಯ ಹಲವಾರು ನಾಯಕರು ಹಾಗೂ ಸಮರ್ಥಕರು ತಮ್ಮ ಹೆಸರಿನ ಎದುರು ಚೌಕೀದರ್ ಎಂದು ಸೇರಿಸಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಪಿಯೂಶ್ ಗೋಯಲ್, ಜೆಪಿ ನಾಡಾ, ಮೀನಾಕ್ಷಿ ಲೇಖಿ, ವಿಜೇಂದ್ರ ಗುಪ್ತಾ, ಛತ್ತೀಸ್ ಗಢದ ಮಾಜಿ ಸಿಎಂ ಡಾ. ರಮಣ್ ಸಿಂಗ್, ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್, ಸ್ಮೃತಿ ಇರಾನಿ, ವಸುಂಧರಾ ರಾಜೆ, ಅಮಿತ್ ಮಾಳವೀಯ ಸೇರಿದಂತೆ ಹಲವಾರು ನಾಯಕರು ತಮ್ಮ ಹೆಸರಿನೆದುರು ಚೌಕೀದಾರ್ ಎಂಬುವುದನ್ನು ಸೇರ್ಪಡೆಗೊಳಿಸಿದ್ದಾರೆ.

ಇನ್ನು ಕರ್ನಾಟಕದ ಬಿಜೆಪಿ ನಾಯಕರಾದ ಆರ್. ಅಶೋಕ್, ಸಿ. ಟಿ. ರವಿ, ಪ್ರತಾಪ್ ಸಿಂಹ, ಸಂಸದ ನಳಿನ್ ಕುಮಾರ್ ಕಟೀಲ್, ಸಂಸದ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವು ನಾಯಕರು ತಮ್ಮ ಹೆಸರಿನ ಎದುರು ಚೌಕೀದಾರ್ ಎಂದು ಸೇರಿಸುವ ಮೂಲಕ ಮೋದಿಯನ್ನು ಬೆಂಬಲಿಸಿದ್ದಾರೆ.

ಶನಿವಾರವೇ ಪಿಎಂ ಮೋದಿ 'ಮೇಂ ಭೀ ಚೌಕೀದಾರ್' ಎಂಬ ಅಭಿಯಾನವನ್ನು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಮೋದಿ ದೇಶದಲ್ಲಿರುವ ಭ್ರಷ್ಟಾಚಾರ, ಸಾಮಾಜಿಕ ಪಿಡುಗು ಹಾಗೂ ಕೆಡುಕಿನ ವಿರುದ್ಧ ಹೋರಾಡುವ ಪ್ರತಿಯೊಬ್ಬ ನಾಗರಿಕನೂ ಚೌಕೀದಾರ್ ಎಂದಿದ್ದರು. ಭಾರತದ ಅಭಿವೃದ್ಧಿಗಾಗಿ ಶ್ರಮಿಸುವ ಪ್ರತಿಯೊಬ್ಬ ವ್ಯಕ್ತಿಯೂ ಚೌಕೀದಾರ್' ಎಂದಿದ್ದರು. ಇದಾದ ಬಳಿಕ ಟ್ವಿಟರ್ ನಲ್ಲಿ #MainBhiChowkidar ಬಹಳಷ್ಟು ಸದ್ದು ಮಾಡಿತ್ತು.

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿಸಿಕೊಂಡಿವೆ. ಹೀಗಿರುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಲವಾರು ಯಾತ್ರೆಗಳಲ್ಲಿ ಚೌಕೀದಾರ್ ಚೋರ್ ಹೆ ಎಂದು ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕರೆಲ್ಲಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರೆಂಬುವುದು ಗಮನಾರ್ಹ.

Follow Us:
Download App:
  • android
  • ios