ಬಿಜಿಂಗ್(ಜ.17): ಮಾರ್ಕ್ಸ್ ವಾದ, ಮಾವೋವಾದದ ನೆರಳಲ್ಲಿ ವಿಶ್ವದ ಅಗಾಧ ಆರ್ಥಿಕ ಶಕ್ತಿಯಾಗಿ ಬೆಳೆದಿರುವ ಚೀನಾ, ದಿನಗಳೆಂದಂತೆ ಈ ವಾದಗಳಿಗೆಲ್ಲಾ ತೀಲಾಂಜಲಿ ನೀಡಿದೆಯಾ ಎಂಬ ಅನುಮಾನ ಬರತೊಡಗಿದೆ.

ಕಾರ್ಮಿಕ ಶಕ್ತಿಯೇ ರಾಷ್ಟ್ರ ಶಕ್ತಿ ಎಂದೆಲ್ಲಾ ಉದ್ದುದ್ದ ಭಾಷಣ ಮಾಡುತ್ತಿದ್ದ ಚೀನಾದಲ್ಲಿ ಅಸಲಿಗೆ ಕಾರ್ಮಿಕರ ಸ್ಥಿತಿ ಹೇಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಸರ್ಕಾರಿ ಸಂಸ್ಥೆಯೋ, ಖಾಸಗಿ ಸಂಸ್ಥೆಯೋ ಉದ್ಯೋಗಿಗಳಿಗೆ ಸುರಕ್ಷತೆ, ಗೌರವ ನೀಡಬೇಕಾದ ಕರ್ತವ್ಯ ಕಮ್ಯೂನಿಸ್ಟ್ ಚೀನಾದಲ್ಲವೇ.

ತನ್ನ ತಿಂಗಳ ಗುರಿ ತಲುಪದ ಕಾರಣಕ್ಕೆ ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗಳನ್ನು ರಸ್ತೆಯಲ್ಲಿ ಅಂಬೆಗಾಲು ಇಡುವಂತೆ ಶಿಕ್ಷೆ ನೀಡಿರುವ ಅಮಾನವೀಯ ಘಟನೆ ನಡೆದಿದೆ.

ಮಹಿಳೆಯರೂ ಸೇರಿದಂತೆ ಕಂಪನಿಯ ನೂರಾರು ಕಾರ್ಮಿಕರು ರಸ್ತೆಯಲ್ಲಿ ಅಂಬೆಗಾಲಿಡುತ್ತಾ ತೆವಳುತ್ತಿದ್ದರೆ, ನೆರೆದಿದ್ದ ಜನ ನೋಡಿ ದಿಗ್ಭ್ರಾಂತರಾಗಿದ್ದರು.

ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು, ಶಿಕ್ಷೆಯನ್ನು ಮೊಟಕುಗೊಳಿಸಿ ರಸ್ತೆಯಿಂದ ಉದ್ಯೋಗಿಗಳನ್ನು ತೆರವುಗೊಳಿಸಿದ್ದಾರೆ. ಸದ್ಯ ಉದ್ಯೋಗಿಗಳನ್ನು ರಸ್ತೆಯಲ್ಲಿ ತೆವಳುವಂತೆ ಮಾಡಿದ ಕಂಪನಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಕಂಪನಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.