ನವದೆಹಲಿ[ಜು.21]: ದೇಶದಲ್ಲಿ ಜನರ ಗುಂಪು ಅಮಾಯಕರನ್ನು ಬಡಿದು ಹತ್ಯೆ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣಕ್ಕೆ ಕಾನೂನೊಂದನ್ನುರೂಪಿಸುವತ್ತ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಪ್ರಸಕ್ತ ಅಧಿವೇಶನದಲ್ಲೇ ಮಸೂದೆಯೊಂದು ಮಂಡನೆ ಆಗುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳಲ್ಲಿ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುವ ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಜನರ ಗುಂಪು ಬಡಿದು ಹತ್ಯೆ ಮಾಡುವ ಪ್ರಕರಣಗಳನ್ನು ತಡೆಯುವ ನಿಟ್ಟಿನಿಂದ ಕಾನೂನೊಂದನ್ನು ರೂಪಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಒಂದು ವರ್ಷದ ಬಳಿಕ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ಮುನ್ನ ಉತ್ತರ ಪ್ರದೇಶ ಕಾನೂನು ಆಯೋಗ, ಬಡಿದು ಹತ್ಯೆಯಲ್ಲಿ ಭಾಗಿಯಾದವರಿಗೆ ಜೀವಾವಧಿ ಸೇರಿದಂತೆ ಕಠಿಣ ಶಿಕ್ಷೆ ವಿಧಿಸುವ ಕರಡು ಮಸೂದೆಯೊಂದನ್ನು ಶಿಫಾರಸು ಮಾಡಿತ್ತು.

ನವಿಲುಗಳ್ಳ ಎಂಬ ಶಂಕೆ: ಮಧ್ಯಪ್ರದೇಶ ಗ್ರಾಮಸ್ಥರು ಅಮಾಯಕನ ಕೊಂದರು!

ನವಿಲುಗಳ ಚೋರ ಎಂಬ ಶಂಕೆ ಮೇರೆಗೆ 58 ವರ್ಷದ ವೃದ್ಧನೋರ್ವನ ಮೇಲೆ ಹಲ್ಲೆ ಮಾಡಿ ಆತನನ್ನು ಹತ್ಯೆಗೈದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಕುರಿತು ತನಿಖೆ ಚುರುಕುಗೊಳಿಸಿರುವ ಪೊಲೀಸರು, ಶನಿವಾರ ಈ ಕೃತ್ಯದಲ್ಲಿ ಭಾಗಿಯಾದ 9 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಕ್ರವಾರ ರಾತ್ರಿ ನೀಮಚ್‌ ಜಿಲ್ಲೆಯ ಲಸೂಡಿ ಅಂತಾರಿ ಗ್ರಾಮದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳನ್ನು ಗ್ರಾಮಸ್ಥರು ಕಂಡಿದ್ದಾರೆ. ಈ ನಾಲ್ವರು ನವಿಲುಗಳ್ಳರು ಎಂದು ಭಾವಿಸಿದ ಗ್ರಾಮಸ್ಥರು ಅವರನ್ನು ಬೆನ್ನಟ್ಟಿಹೋಗಿದ್ದಾರೆ. ಇತರ ಮೂವರು ತಪ್ಪಿಸಿಕೊಂಡಿದ್ದು, ಕೈಗೆ ಸಿಕ್ಕ ವೃದ್ಧ ಬಂಚ್ಡಾ(58) ಎಂಬಾತನ ಮೇಲೆ ಮನಸೋ ಇಚ್ಛೆ ಥಳಿಸಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ವೃದ್ಧ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿಗಳ ವಿರುದ್ಧ ಪರಿಶಿಷ್ಟಜಾತಿ/ಪಂಗಡ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಇನ್ನಿತರ ಕಾನೂನುಗಳಡಿ ಕೇಸ್‌ ದಾಖಲಿಸಿಕೊಳ್ಳಲಾಗಿದೆ.