ನವದೆಹಲಿ[ಜ.04]: ಮಕ್ಕಳ ಮೇಲೆ ನಡೆಯುತ್ತಿರುವ ಡಿಜಿಟಲ್ ಲೈಂಗಿಕ ದೌರ್ಜನ್ಯ ಮತ್ತು ಮಕ್ಕಳ ಸುರಕ್ಷತೆಗೆ ಆತಂಕ ತಂದಿರುವ ಮೊಬೈಲ್ ಅಪ್ಲಿಕೇಷನ್‌ಗಳನ್ನು ತಡೆಯಲು ಕೇಂದ್ರ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದ ರಾಜೀವ್‌ ಚಂದ್ರಶೇಖರ್‌ ಅವರು ಬರೆದಿರುವ ಪತ್ರಕ್ಕೆ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಮಕ್ಕಳ ಅಶ್ಲೀಲ ಚಿತ್ರ ನಿಷೇಧಿಸಿ: ಕೇಂದ್ರಕ್ಕೆ ಸಂಸದ RC ಪತ್ರ

ರಾಜೀವ್‌ ಚಂದ್ರಶೇಖರ್‌ ಅವರು ಡಿ.26ರಂದು ಸಚಿವ ರವಿಶಂಕರ್‌ ಪ್ರಸಾದ್‌ ಅವರಿಗೆ ಪತ್ರ ಬರೆದಿದ್ದರು. ಗೂಗಲ್ ಪ್ಲೇ ಅಥವಾ ಅಪ್ಲಿಕೇಷನ್‌ ಸ್ಟೋರ್‌ಗಳಲ್ಲಿ ಲಭ್ಯವಿರುವ ಕ್ವಾಯಿ, ಕ್ಲಿಕ್‌, ಟಿಕ್‌ ಟಾಕ್‌, ನ್ಯೂಸ್‌ ಡಾಗ್‌, ಲೈವ್‌ ಮಿ ಮತ್ತು ಹಲೋ ಮುಂತಾದವುಗಳಿಂದ ಮಕ್ಕಳ ಸುರಕ್ಷತೆಗೆ ಧಕ್ಕೆಯಾಗುವ ಮತ್ತು ಮಕ್ಕಳ ಪೋರ್ನೊಗ್ರಾಫಿ ಬೆಳೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂಟರ್‌ಪೋಲ್’ನ ಮಾಹಿತಿ ಪ್ರಕಾರ 2017ರಲ್ಲಿ 2.4 ಮಿಲಿಯನ್‌ ಮಕ್ಕಳ ಮೇಲೆ ಆನ್‌ಲೈನ್‌ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ. ಲೈಂಗಿಕ ದೌರ್ಜನ್ಯ ಎಸಗುವ ವ್ಯಕ್ತಿಗಳು ಪ್ರಾದೇಶಿಕ ಭಾಷೆಗಳ ಮೂಲಕ ಮಕ್ಕಳನ್ನು ಸಂಪರ್ಕಿಸಿ ಅವರ ಬ್ಲಾಕ್‌ಮೇಲ್, ಶೋಷಣೆ ಮುಂತಾದವುಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಪತ್ರದಲ್ಲಿ ಕೇಂದ್ರ ಸಚಿವರ ಗಮನ ಸೆಳೆದಿದ್ದರು. ಮಾತ್ರವಲ್ಲದೆ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಲಹೆ ನೀಡಿದ್ದರು.

ಶಿಶುಕಾಮಿಗಳಿಗೆ ಗಲ್ಲು ಶಿಕ್ಷೆ: ಕೇಂದ್ರದ ನಿರ್ಧಾರಕ್ಕೆ ಆರ್‌ಸಿ ಸ್ವಾಗತ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ರವಿಶಂಕರ್‌ ಪ್ರಸಾದ್‌, ಮಕ್ಕಳ ಪೋರ್ನೋಗ್ರಫಿಗೆ ಅವಕಾಶ ನೀಡುವ ಅಪ್ಲಿಕೇಶನ್‌, ವೆಬ್‌ಸೈಟ್‌ಗಳನ್ನು ನಿಷೇಧಿಸುವ, ದಂಡ ವಿಧಿಸಲು ಪೂರಕವಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ಕ್ಕೆ ತಿದ್ದುಪಡಿ ತರುವ ಪ್ರಸ್ತಾವನೆ ತಮ್ಮ ಮುಂದಿದೆ ಎಂದು ಹೇಳಿದ್ದಾರೆ. ಪ್ರಸ್ತಾವನೆ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು ಇನ್ನಷ್ಟೆ ತಿದ್ದುಪಡಿ ಅಧಿಕೃತಗೊಳ್ಳಬೇಕಿದೆ.