ಬೆಂಗಳೂರು: ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದ್ದ ಲೋಕಾಯುಕ್ತ ನ್ಯಾ.ವಿಶ್ವನಾಥ್​ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ನ್ಯಾ. ವಿಶ್ವನಾಥ್​ ಶೆಟ್ಟಿ ಅವರಿಗೆ ಚಾಕು ಇರಿತ ನಡೆಸಿರುವುದು ಬರೇ  ಹತಾಶೆಯ ಕೃತ್ಯವಲ್ಲ, ಬದಲಾಗಿ ಅದರ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ ಎಂಬ ಅನುಮಾನಗಳು ಹುಟ್ಟಿವೆ.

ಕೆಲವು ‘ಕಾಣದ ಕೈಗಳು’ ಉದ್ದೇಶ ಪೂರ್ವಕವಾಗಿ ಆರೋಪಿ ತೇಜ್​ ರಾಜ್​ ಶರ್ಮಾ ಮೂಲಕ ವಿಶ್ವನಾಥ್ ಶೆಟ್ಟಿ ಮೇಲೆ ಹಲ್ಲೆ ನಡೆಸಿವೆಯೋ? ಎಂಬ ಬಗ್ಗೆ ಸಿಸಿಬಿ ಪೊಲೀಸರರು ತನಿಖೆ ನಡೆಸುತ್ತಿದ್ದಾರೆ.

ಸಿಸಿಬಿ ಪೊಲೀಸರಿಂದ ಆ ದುಷ್ಟಶಕ್ತಿಯ ಹುಡುಕಾಟ ನಡೆದಿದೆ. ಅದಕ್ಕಾಗಿ ಸಿಸಿಬಿ ಪೊಲೀಸರು ಮಂಪರು ಪರೀಕ್ಷೆಯ ಮೊರೆಹೋಗಿದ್ದಾರೆ.

ಈ ಹಿಂದೆ ಸಿಸಿಬಿ ಪೊಲೀಸರು ತನಿಖೆ ನಡೆಸಿ ಸಲ್ಲಿಸಿದ್ದ ಚಾರ್ಜ್​ಶೀಟ್​ನ್ನು ಕಂಡು ಲೋಕಾಯುಕ್ತ ನ್ಯಾ. ವಿಶ್ವನಾಥ್​ ಶೆಟ್ಟಿ ಕೆಂಡಾಮಂಡಲರಾಗಿದ್ದರು. ಆರೋಪಿ ಹೇಳಿದ್ದನ್ನು ಮಾತ್ರ ದಾಖಲಿಸಿದ್ದೀರಿ, ಆತನ ಹಿಂದಿರುವ ದುಷ್ಟಶಕ್ತಿ ಹುಡುಕಿ ಎಂದಿದ್ದರು.

ಬಳಿಕ ಲೋಕಾಯುಕ್ತ  ವಿಶ್ವನಾಥ್​ ಶೆಟ್ಟಿ ಅವರ ಸೂಚನೆ ಮೇರೆಗೆ ಮರುತನಿಖೆಗೆ ಇಳಿದಿರುವ ಸಿಸಿಬಿ, ಎಷ್ಟೇ ಪ್ರಯತ್ನ ಪಟ್ಟರೂ ತನ್ನ ಹಿಂದಿನ ಶಕ್ತಿಯ ಬಗ್ಗೆ ಬಾಯ್ಬಿಡದ ತೇಜ್​ರಾಜ್​ ಶರ್ಮಾ ಬಾಯಿ ಬಿಡಿಸಲು ಮಂಪರು ಪರೀಕ್ಷೆಗೆ ಮುಂದಾಗಿದ್ದರು.

ಇದೀಗ ಕೋರ್ಟ್ ಅನುಮತಿ ಪಡೆದು, ಡಿಸಿಪಿ ಜೀನೆಂದ್ರ ಖಣಗಾವಿ ನೇತೃತ್ವದಲ್ಲಿ ಸಿಸಿಬಿ ತಂಡ ಅಹಮದಾಬಾದ್​ಗೆ ತೆರಳಿದ್ದು, ಬುಧವಾರ ತೇಜ್​ರಾಜ್​ ಶರ್ಮಾನನ್ನು ಮಂಪರು ಪರೀಕ್ಷೆಗೊಳಪಡಿಸಲಿದೆ. ಮಂಪರು ಪರೀಕ್ಷೆಯ ನಂತರ ಹಲ್ಲೆಯ ಹಿಂದಿನ ಶಕ್ತಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.

ಕಳೆದ ಮಾ.7 ರಂದು, ವಿಧಾನಸೌಧ ಪಕ್ಕದಲ್ಲಿರುವ ಲೋಕಾಯುಕ್ತ ಕಟ್ಟಡದಲ್ಲಿರುವ  ನ್ಯಾ. ಶೆಟ್ಟಿ ಕಚೇರಿಗೆ ಸಂದರ್ಶಕನ ಸೋಗಿನಲ್ಲಿ ತೆರಳಿ ಆರೋಪಿ ತೇಜ್​ರಾಜ್​ ಶರ್ಮಾ ಚಾಕುವಿನಿಂದ ಹಲ್ಲೆ ನಡೆಸಿದ್ದನು.