ಬೆಂಗಳೂರು: ಖ್ಯಾತ ಚಲನಚಿತ್ರ ನಾಯಕ ನಟರೊಬ್ಬರ ಹತ್ಯೆಗೆ ಕುಖ್ಯಾತ ರೌಡಿ ಸ್ಲಂ ಭರತ ಸುಪಾರಿ ಪಡೆದಿದ್ದ ಸಂಗತಿ ಸಿಸಿಬಿ ವಿಚಾರಣೆ ವೇಳೆ  ಬೆಳಕಿಗೆ ಬಂದಿದೆ. ಈ ಸುಪಾರಿ ಕೃತ್ಯವು ಬಹಳ ಹಿಂದಿನ ವಿದ್ಯಮಾನವಾಗಿದೆ. 

ಆಗಲೇ ಪೊಲೀಸರಿಗೆ ಜೀವ ಬೆದರಿಕೆ ಕುರಿತು ಆ ನಾಯಕ ನಟ ಸಹ ಲಿಖಿತ ದೂರು ಕೊಟ್ಟಿದ್ದರು. ಆದರೆ ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಸಿಗದ ಕಾರಣ ಪ್ರಕರಣವು ತನಿಖೆ ನಡೆಯದೆ ತಣ್ಣಗಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ನಗರದಲ್ಲಿ ಫೆ.18 ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ಅಲೋಕ್ ಕುಮಾರ್ ಅವರು, ನಟನ ಹತ್ಯೆಗೆ ರೌಡಿಶೀಟರ್ ಭರತ ಸುಪಾರಿ ಪಡೆದಿರುವ ಕುರಿತು ವಿಚಾರಣೆ ನಡೆಸಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದರು. 

ಹಲವು ವರ್ಷಗಳಿಂದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭರತ ಸಕ್ರಿಯನಾಗಿದ್ದು, ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ನಟನ ಹತ್ಯೆಗೆ ಯಾರು ಸುಪಾರಿ ಕೊಟ್ಟಿದ್ದರು ಅಥವಾ ಭರತನೇ ಮತ್ತೊಬ್ಬರಿಗೆ ಸುಪಾರಿ ನೀಡಿದ್ದನೇ ಎಂಬುದು ಖಚಿತವಾಗಿಲ್ಲ.

ಇದೊಂದು ಸೂಕ್ಷ್ಮ ವಿಚಾರವಾಗಿರುವ ಕಾರಣ ನಟನ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಹೆಚ್ಚುವರಿ ಆಯುಕ್ತರು ಸ್ಪಷ್ಟಪಡಿಸಿದರು. ಜ.24 ರಂದು ಗುಂಡಿನ ದಾಳಿ ನಡೆಸಿ ಕೆಂಗೇರಿ ಸಮೀಪ ಸ್ಲಂ ಭರತ್‌ನನ್ನು ಸಿಸಿಬಿ ಬಂಧಿಸಿತ್ತು. ಬಳಿಕ ವಿಚಾರಣೆ ವೇಳೆ ಆತ ಸುಪಾರಿ ಸಂಗತಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.