ನವದೆಹಲಿ[ಆ.11]: ಸೊಸೆಯನ್ನೇ ರೇಪ್ ಮಾಡಿ, ಬೆದರಿಕೆಯೊಡ್ಡಿರುವ ಆರೋಪದಡಿಯಲ್ಲಿ ಬಿಜೆಪಿಯ ಮಾಜಿ ಶಾಸಕ ಮನೋಜ್ ಶೌಕೀನ್ ವಿರುದ್ಧ ಪ್ರಕರಣ ದಾಖಲಾಗಿದೆ. 

ಪ್ರಕರಣ ಸಂಬಂಧ ಮಾಹಿತಿ ನೀಡಿದ ದೆಹಲಿ ಪೊಲೀಸರು '2018ರ ಡಿಸೆಂಬರ್ 31 ಹಾಗೂ 2019ರ ಜನವರಿ 1 ರಂದು ತನ್ನ ಮಾವ ಬಂದೂಕು ತೋರಿಸಿ ತನ್ನ ಮೇಲೆ ಅತ್ಯಾಚಾರ ನಡೆಸಿ, ಬೆದರಿಕೆಯೊಡ್ಡಿದ್ದಾರುವುದಾಗಿ ಮಾಜಿ ಶಾಸಕನ ಸೊಸೆ ದೂರು ನೀಡಿದ್ದಾರೆ. ಈ ದೂರಿನನ್ವಯ ನಾಂಗಲೋಯಿ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಮನೋಜ್ ಶೌಕೀನ್ ವಿರುದ್ಧ ಪ್ರಕರಣ FIR ದಾಖಲಿಸಿದ್ದೇವೆ' ಎಂದಿದ್ದಾರೆ.

ದೂರಿನಲ್ಲೇನಿದೆ?

2018ರ ಡಿಸೆಂಬರ್ 31ರಂದು ನಾನು ನನ್ನ ಗಂಡ, ತಮ್ಮದಿರೊಂದಿಗೆ ತವರು ಮನೆಯಿಂದ ಅತ್ತೆ ಮನೆಗೆ ಬರುತ್ತಿದ್ದೆ. ಆದರೆ ನನ್ನ ಗಂಡ ನನ್ನನ್ನು ಮನೆಗೆ ಕರೆದೊಯ್ಯುವ ಬದಲು ಹತ್ತಿರದ ಹೋಟೆಲ್ ಗೆ ಕರೆದೊಯ್ದರು. ನಾವು ಹೋಟೆಲ್ ಗೆ ತಲುಪಿದಾಗ ಕೆಲ ಸಂಬಂಧಿಕರು ಹೊಸ ವರ್ಷದ ಆಚರಣೆಗಾಗಿ ಅಲ್ಲಿ ಆಗಮಿಸಿದ್ದರು. ಪಾರ್ಟಿ ಮುಗಿದ ಬಳಿಕ 2019ರ ಜನವರಿ 1ರಂದು ಸುಮಾರು ರಾತ್ರಿ 12.30ಕ್ಕೆ ಮೀರಾ ಬಾಗ್ ನಲ್ಲಿರುವ ಅತ್ತೆ ಮನೆಗೆ ಬಂದೆವು. ನನ್ನ ಗಂಡ ಗೆಳೆಯರೊಂದಿಗೆ ಹೊರಗೆ ಹೋದರು ನಾನು ಮಲಗಲು ನನ್ನ ಕೋಣೆಗೆ ತೆರಳಿದ್ದೆ.

ಆದರೆ ರಾತ್ರಿ 1.30ಕ್ಕೆ ಮಾವ ಬಂದು, ನಿನ್ನ ಬಳಿ ಕೊಂಚ ಮಾತನಾಡುವುದಿದೆ ಹೀಗಾಗಿ ಬಾಗಿಲು ತೆರೆಯುವಂತೆ ಹೇಳಿದರು. ಬಾಗಿಲು ತೆರೆಯುತ್ತಿದ್ದಂತೆಯೇ ಒಳಗೆ ಬಂದ ಅವರು ನನ್ನ ಮೈಮುಟ್ಟಿ ಮಾತನಾಡಲಾರಂಭಿಸಿದರು. ಅವರು ಮದ್ಯ ಸೇವಿಸಿದ್ದರಿಂದ ನಿಮ್ಮ ಕೋಣೆಗೆ ಹೋಗಿ ಮಲಗಿ ಎಂದು ಹೇಳಿದೆ. ಆದರೆ ಸುಮ್ಮನಾಗದ ಅವರು ತಮ್ಮ ಬಂದೂಕು ತೆಗೆದು, ನನ್ನನ್ನು ಹೊಡೆದರು. ರಕ್ಷಣೆಗಾಗಿ ಕೂಗಲು ಮುಂದಾದಾಗ ನನ್ನ ತಮ್ಮನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದರು. ಬಳಿಕ ನನ್ನ ಮೇಲೆ ಅತ್ಯಾಚಾರ ನಡೆಸಿದರು. ಆರಂಭದಲ್ಲಿ ದಾಂಪತ್ಯ ಜೀವನ ಸರಿಯಾಗಿರಬೇಕು ಹಾಗೂ ತಮ್ಮ ಸೇಫಾಗಿ ಇರಬೇಕೆಂದು ಸುಮ್ಮನಾಗಿದ್ದೆ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ತನ್ನ ಗಂಡನ ಮನೆಯವರು ಕೌಟುಂಬಿಕ ದೌರ್ಜನ್ಯವೆಸಗುತ್ತಿದ್ದು, ಈ ಕುರಿತಾಗಿ ಈ ಮೊದಲೇ, ಸಾಕೆತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಆಕೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಸದ್ಯ ಬಿಜೆಪಿ ಮಾಜಿ ಶಾಸಕನ ವಿರುದ್ಧ ದೆಹಲಿ ಪೊಲೀಸರು ಐಪಿಸಿ ಸೆಕ್ಷನ್ 376 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.